

ತುಮಕೂರು: ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.
ಹನಿಟ್ರ್ಯಾಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜಕಾರಣಿಗಳು, ಉದ್ಯಮಿಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ಅವರ ಹೆಸರಿಗೆ ಕಳಂಕ ತರುವ ಹೇಯ ಕೃತ್ಯ ಇದಾಗಿದ್ದು, ಇಂತಹ ಕೆಲ ಪ್ರಕರಣಗಳಿಗೆ ರಾಜಕಾರಣಿಗಳು ಕುಮ್ಮಕ್ಕು ನೀಡುತ್ತಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಯಲಿಗೆಳೆಯಬೇಕು ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹನಿಟ್ರ್ಯಾಪ್ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಡಿಜಿಪಿ ಮಟ್ಟದ ಉನ್ನತ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅದರ ವರದಿ ಸೋರಿಕೆ ಆಗದಂತೆ ಗೌಪ್ಯತೆ ಕಾಪಾಡಿಕೊಂಡು 6 ತಿಂಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಅದರನ್ವಯ ವಿಚಾರಣೆ ನಡೆಸಿ ಹನಿಟ್ರಾ$್ಯಪ್ನಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಹನಿಟ್ರಾ$್ಯಪ್ ಗಂಭೀರ ಸ್ವರೂಪದ ಅಪರಾಧಿಕ ನಂಬಿಕೆ ದ್ರೋಹವೆನಿಸಿದೆ. ಇದು ಕಾನೂನಿನ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ. ಹನಿಟ್ರ್ಯಾಪ್ ಮಾಡಿ ಅಕ್ರಮವಾಗಿ ಹಣ ಸಂಪಾದಿಸುವ ಕಾನೂನುಬಾಹಿರ ಕೃತ್ಯಗಳಲ್ಲಿ ಕೆಲ ಪ್ರಬಲ ರಾಜಕಾರಣಿಗಳು, ಕೆಲ ಪೊಲೀಸರು, ಪತ್ರಕರ್ತರು ಹಾಗೂ ದಾರಿತಪ್ಪಿದ ಸಮಾಜಘಾತುಕ ಶಕ್ತಿಗಳು ತೊಡಗಿಕೊಂಡಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ
ಜಿಲ್ಲೆಗಳಲ್ಲಿ ಇಂತಹ ಕೃತ್ಯಗಳಲ್ಲಿ ಸಕ್ರಿಯವಾಗಿರುವುದು ಕಂಡುಬಂದಿದೆ ಎಂದು ಶಿವಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ಅಂಬೇಡ್ಕರ್ ಪ್ರಚಾರ ಸಮಿತಿ ಒಬಿಸಿ ಜಿಲ್ಲಾಧ್ಯಕ್ಷ ಎಸ್.ರಾಮಚಂದ್ರರಾವ್, ರಾಜ್ಯ ರೈತ ಸಂಘ ಕಾರ್ಯದರ್ಶಿ ಎಸ್.ಬಸವರಾಜು ಹಾಜರಿದ್ದರು.
ಸುಪ್ರೀಂ ಕೋರ್ಟ್ಗೆ ಪತ್ರ
ಹನಿಟ್ರ್ಯಾಪ್ ಪ್ರಕರಣ ತನಿಖೆಗಾಗಿ ಸುಪ್ರೀಂ ಕೊರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದೇನೆ. ಈ ಸಂಬಂಧ ಸಿಎಂ, ಗೃಹ ಸಚಿವರಿಗೂ ಮನವಿ ಸಲ್ಲಿಸಿ, ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಪ್ರಶ್ನೆಯೊಂದಕ್ಕೆ ಶಿವಣ್ಣ ಪ್ರತಿಕ್ರಿಯಿಸಿದರು.
ಇದೊಂದು ಕ್ರಿಮಿನಲ್ ಉದ್ಯಮ !
ಹನಿಟ್ರ್ಯಾಪ್ ಆರೋಪಿತರು ರಾಜಕಾರಣಿಗಳು, ಅವರ ಕುಟುಂಬದವರು, ಸರ್ಕಾರಿ ಅಧಿಕಾರಿಗಳು ಮತ್ತು ಇವರ ಕುಟುಂಬದವರನ್ನು, ಮಠಾಧೀಶರು, ಚಿನ್ನದ ಅಂಗಡಿ ಮಾಲೀಕರು, ನ್ಯಾಯಾಧೀಶರು, ನ್ಯಾಯವಾದಿಗಳು, ಶ್ರೀಮಂತ ಉದ್ಯಮಿಗಳು ಹೀಗೆ ಹಲವರನ್ನು ಗುರಿಯಾಗಿಸಿಕೊಂಡು ಒಳಸಂಚು ರೂಪಿಸಿ, ವಂಚನೆ, ಜೀವ ಬೆದರಿಕೆ, ಅಪಹರಣ, ಮಾರಣಾಂತಿಕ ಹಲ್ಲೆ, ಕೊಲೆ, ಹಣ ಸುಲಿಗೆ ಮಾಡುವುದು ಮುಂತಾದ ಗಂಭೀರ ಅಪರಾಧಗಳನ್ನು ಎಸಗುತ್ತಿದ್ದಾರೆ. ರಾಜ್ಯದಲ್ಲಿ ಹನಿಟ್ರ್ಯಾಪ್ ಒಂದು ಕ್ರಿಮಿನಲ್ ಉದ್ಯಮವಾಗಿ ಬೆಳೆಯುತ್ತಿದೆ. ಇದಕ್ಕೆ ಕೆಲ ರಾಜಕಾರಣಿಗಳ ಕುಮ್ಮಕ್ಕು ಇದೆ ಎಂದು ಶಿವಣ್ಣ ದೂರಿದರು.