ಬದುಕು ಬದಲಾಯಿಸುವ ಜ್ಞಾನದ ಜಯಂತಿ ಆಗಲಿ: ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಆಶಯ

24
Published on

ಮೈಸೂರು: ಸಂವಿಧಾನದಿಂದ ಭಾರತದ ಚರಿತ್ರೆಯನ್ನು ಬದಲಾಯಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಬೇಕಾಗಿದ್ದು, ಅಂತಹ ಮಹಾಜ್ಞಾನಿಯ ಜಯಂತಿಯನ್ನು ನಮ್ಮ ಬದುಕನ್ನು ಬದಲಾಯಿಸುವ ಜ್ಞಾನದ ಜಯಂತಿಯಾಗಿಸಬೇಕು ಎಂದು ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಸಲಹೆ ನೀಡಿದರು.
ಬೋಗಾದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಸಪ್ತಾಹ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಊಟವಿಲ್ಲದೆ 2 ದಿನ ಬದುಕಬಲ್ಲೆ, ಆದರೆ ಪುಸ್ತಕವಿಲ್ಲದೆ ಒಂದು ಕ್ಷಣವೂ ಬದುಕಲಾರೆ ಎಂದಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮೋಜು, ಮಸ್ತಿ ಮಾಡಲು ಬಂದಿಲ್ಲ ಎನ್ನುವುದನ್ನು ತಿಳಿಯಬೇಕು. ಹಾಸ್ಟೆಲ್‌ನಲ್ಲಿ ಊಟ ಸರಿಯಿಲ್ಲ ಎಂದು ಗಲಾಟೆ ಮಾಡಬಾರದು. ಹಸಿವನ್ನು ತಡೆದುಕೊಳ್ಳದವರು ಅಂಬೇಡ್ಕರ್ ಅವರನ್ನು ತಿಳಿದುಕೊಳ್ಳಲಾರರು ಎಂದರು.
ಸರ್ಕಾರ ನಿಮಗೆ ಎಲ್ಲ ಸೌಲಭ್ಯಗಳನ್ನು ಕೊಟ್ಟಿದೆ, ಆದರೆ ಅಂಬೇಡ್ಕರ್ ಒಮ್ಮೆ ಜಾಗವಿಲ್ಲದೆ ಮಳೆಯಲ್ಲೇ, ಪಾರ್ಕಿನಲ್ಲಿ ಕಾಲ ಕಳೆಯುತ್ತಾರೆ. ಒಂಟಿಕೊಪ್ಪಲ್ ಹಾಸ್ಟೆಲ್‌ನಲ್ಲಿ ಓದಿದ ಮೀನಾಕ್ಷಿ ಅವರು ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿ ಆಗಿದ್ದಾರೆ. ನೀವು ಸಹ ಚೆನ್ನಾಗಿ ಓದಿ ಉನ್ನತ ಹುದ್ದೆಗಳಿಗೆ ಬನ್ನಿರಿ. ಅರ್ಜಿಗಳನ್ನು ಕೊಡುವ ಜಾಗದಲ್ಲಿ ನೀವು ನಿಲ್ಲಬೇಡಿ, ಅರ್ಜಿಗಳನ್ನು ತೆಗೆದುಕೊಳ್ಳುವ ಜಾಗದಲ್ಲಿ ನೀವಿರಬೇಕು ಎಂದು ವಿದ್ಯಾರ್ಥಿಗಳಗೆ ಸಲಹೆ ನೀಡಿದರು.
ಮೊಬೈಲ್ ಸಂಸ್ಕೃತಿ ನಿಮ್ಮನ್ನು ಹಾಳು ಮಾಡುತ್ತಿದೆ. ಪುಸ್ತಕ ನಿಮ್ಮನ್ನು ತಲೆ ಎತ್ತುವಂತೆ ಮಾಡುತ್ತದೆ. ನಮ್ಮ ಬದುಕು ಪೆನ್ನಿನ ಭಾರತವನ್ನು ಕಟ್ಟಬೇಕು. ನಿಮ್ಮ ಪೆನ್ನು ಭಾರತದ ಐಕ್ಯತೆ, ಸಮಗ್ರತೆಯನ್ನು ಕಟ್ಟುವ ಪೆನ್ನಾಗಬೇಕು. ವಿದ್ಯಾರ್ಥಿಗಳು ನೀವೇನಾಗಬೇಕು ಎಂಬ ಗುರಿಯನ್ನು ಪ್ರತಿಯೊಬ್ಬರು ಇಟ್ಟುಕೊಳ್ಳಬೇಕು. ನಿಮ್ಮ ಶತ್ರುಗಳು ನಿಮ್ಮ ಮುಂದೆ ನಿಲ್ಲದಂತೆ ಓದಬೇಕು. ದೇವರು, ಧರ್ಮ, ಮೂಢನಂಬಿಕೆ ಸಹವಾಸ ಬಿಟ್ಟು ಪುಸ್ತಕಗಳನ್ನು ಓದಿ ಜ್ಞಾನಿಗಳಾಗಿ ಅಂಬೇಡ್ಕರ್ ಅವರ ವಾರಸುದಾರರಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಯೋಜನಾ ಸಮನ್ವಯ ಅಧಿಕಾರಿ ಎನ್.ಮುನಿರಾಜು, ಮಂಟೇಲಿಂಗಯ್ಯ, ಸಿಡಿಪಿಒ ಎಂ.ತಿಬ್ಬಯ್ಯ ಮಾತನಾಡಿದರು. ಸಹಾಯಕ ನಿರ್ದೇಶಕ ಕೆ. ಸಿದ್ದಲಿಂಗು, ವಾರ್ಡನ್ ಚಿಕ್ಕೀರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net