

ಗೋಕರ್ಣ: ಭಾರತದ ಪುರಾತನವಾದ ಸನಾತನ ಧರ್ಮವನ್ನು ಸಂರಕ್ಷಿಸಿಕೊಳ್ಳಲು ಸರ್ವ ಧರ್ಮಪೀಠಗಳಲ್ಲಿ ಸರ್ವಸಮ್ಮತವಾದ ಒಮ್ಮತಭಾವ ಒಡಮೂಡಲಿ. ಈ ಮೂಲಕ ಎಲ್ಲ ಧರ್ಮಪೀಠಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡುವಂತಾಗಬೇಕು ಎಂದು 31ನೇ ಅನಾವರಣ ಚಾತುರ್ವಸ್ಯ ವ್ರತನಿಷ್ಠ ಪೀಠಾಧಿಪತಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಮಂಗಳವಾರ ‘ಸತ್ಯಮೇವ ಜಯತೇ’ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಹೇಳಿದರು.
ದ್ವೈತ ಅಥವಾ ಎರಡು ಎಂಬ ಭಾವವಿಲ್ಲದೆ ಎಲ್ಲ ಜನರು, ಎಲ್ಲ ಜೀವಗಳು ಮತ್ತು ಸರ್ವ ಸಮಾಜವನ್ನು ಏಕರೂಪದಲ್ಲಿ ನೋಡುವುದೇ ಅದ್ವೈತ ಸಿದ್ಧಾಂತ. ಶ್ರೀಶಂಕರಗುರುವರ್ಯರಿಂದ ಪ್ರಣೀತವಾದ ಈ ಅದ್ವೈತ ಸಿದ್ಧಾಂತ ಕೇವಲ ಬಾಹ್ಯಾರ್ಥ ಬಾಹುಳ್ಯದ ಸಿದ್ಧಾಂತವಾಗಿ ಉಳಿಯಬಾರದು ಎನ್ನುವುದು ನಮ್ಮ ಮಠ ಪರಂಪರೆಯ ಯತಿಧರ್ಮವಾಗಿದೆ. ನಮ್ಮ ಶ್ರೀಮಠದ ಇತಿಹಾಸದಲ್ಲಿ ಇದುವರೆಗೆ ಯಾವುದೇ ಯತಿವರ್ಯರು ಯಾರನ್ನೂ ಶಪಿಸಿದ, ಬೇರೆ ಸಂಸ್ಥೆ ಅಥವಾ ಅನ್ಯ ಮಠಗಳ ಮೇಲೆ ಆಕ್ರಮಣ ನಡೆಸಿದ ನಿದರ್ಶನಗಳಿಲ್ಲ. ಆದಾಗ್ಯೂ ನಮ್ಮ ಮಠದ ಮೇಲೆ ಸಾಲು ಸಾಲು ದಾಳಿಗಳು ನಡೆದಿವೆ. ಈ ಆಕ್ರಮಣಗಳು ಅನ್ಯ ಮತೀಯರು, ಮೊಘಲರು ಅಥವಾ ಬ್ರಿಟಿಷರಿಂದ ನಡೆಸಲ್ಪಟ್ಟವುಗಳಲ್ಲ. ಇವುಗಳು ನಮ್ಮೊಳಗಿಂದಲೇ, ಬೇರೆ ಬೇರೆ ಮಠಗಳಿಂದ ಆಗಿರುವಂತಹ ದಾಳಿಗಳಾಗಿವೆ. ಇಷ್ಟಾಗಿಯೂ ಎಲ್ಲ ಕಾಲ ಮತ್ತು ಎಲ್ಲ ಸನ್ನಿವೇಶಗಳಲ್ಲಿ ಮಠದ ಶಿಷ್ಯಭಕ್ತರು ದೃಢವಾಗಿ ಮಠದ ಪರವಾಗಿ ನಿಂತಿದ್ದಾರೆ ಎಂದರು.
ಮಠದ ಕುರಿತಾದ ಮಹಾರಾಜರ ನ್ಯಾಯ ತೀರ್ವನದ ಅನಾವರಣವನ್ನು ವಕೀಲ ನಾಗರಾಜ ನಾಯಕ ನೆರವೇರಿಸಿದರು. ಚಾತುರ್ವಸ್ಯ ಸಮಿತಿಯ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಹವ್ಯಕ ಮಹಾಮಂಡಲ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಮತ್ತಿತರರಿದ್ದರು.