

ಶಿಗ್ಗಾಂವಿ: ಸಂವಿಧಾನದ ಆಶಯದಂತೆ ದೇಶ ಕಟ್ಟುವುದರ ಜತೆಗೆ ಹೋರಾಟ, ಚಿಂತನೆ, ಚರ್ಚೆಯ ಮೂಲಕ ಅಭಿಯಾನ ರೀತಿಯಲ್ಲಿ ಸಂವಿಧಾನ ಉಳಿಸುವ ಕಾರ್ಯ ಮಾಡೋಣ ಎಂದು ಲೇಖಕಿ, ಹಿರಿಯ ಸಾಹಿತಿ ಡಾ.ಎಚ್.ಎಲ್. ಪುಷ್ಪಾ ಹೇಳಿದರು.
ತಾಲೂಕಿನ ಗೊಟಗೋಡಿಯ ಜಾನಪದ ವಿವಿಯ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ: ಸಾಂವಿಧಾನಿಕ ಆಶಯಗಳು ಎಂಬ ಮೂರು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಮಾತನಾಡಿ, ಶಿಬಿರಾರ್ಥಿಗಳಿಗೆ ಆತ್ಮ ವಿಮರ್ಶೆಯ ಸಾಹಿತ್ಯದ ಜತೆಗೆ ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಲು ಅವಕಾಶ ನೀಡಿದ ಶಿಬಿರ ಅರ್ಥಪೂರ್ಣವಾಗಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಕನ್ನಡಿಗರ ಬದುಕಿನ ಗಟ್ಟಿತನವೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಇದು ಎಲ್ಲ ವಿಶ್ವವಿದ್ಯಾಲಯಗಳಿಗಿಂತಲೂ ವಿಭಿನ್ನ ಹಾಗೂ ವಿಶೇಷವಾದದ್ದು ಎಂದರು.
ವಿವಿ ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಶಯಗಳಾದ ಸಮಾನತೆ, ಸಹಕಾರ ಸಹಬಾಳ್ವೆಯನ್ನು ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಅಂದಾಗ ಈ ತರದ ಶಿಬಿರಗಳು, ಗೋಷ್ಠಿಗಳು ಸಾರ್ಥಕವಾಗುತ್ತವೆ ಎಂದರು.
ಶಿಬಿರದ ನಿರ್ದೇಶಕರಾದ ಡಾ.ಎ.ಬಿ. ರಾಮಚಂದ್ರಪ್ಪ ಡಾ.ಜಿ. ಪ್ರಶಾಂತ ನಾಯಕ, ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೈತ್ರಾಯಿಣಿ ಗದಿಗೆಪ್ಪಗೌಡ್ರ ಮಾತನಾಡಿದರು.
ಪ್ರಮಾಣ ಪತ್ರ ವಿತರಣೆ: ಶಿಬಿರದಲ್ಲಿ ಭಾಗಿಯಾಗಿದ್ದ ಶಿಬಿರಾರ್ಥಿಗಳಿಗೆ ಕುಲಪತಿ, ಕುಲಸಚಿವರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ರಿಜಿಸ್ಟ್ರರ್ ಮತ್ತು ಶಿಬಿರದ ನಿರ್ದೇಶಕರು ಪ್ರಮಾಣಪತ್ರ ವಿತರಿಸಿದರು.
ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾವಿ ಹಾಗೂ ಶರೀಫ ಮಾಕಪ್ಪನವರ ಅವರ ತಂಡ ಪ್ರಾರ್ಥಿಸಿತು. ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ನಿರೂಪಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ರಜಿಸ್ಟ್ರಾರ್ ಕರಿಯಪ್ಪ ಎನ್. ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಮಾನ್ಪಡೆ ವಂದಿಸಿದರು. ಹಿರಿಯ ಸಂಶೋಧನಾಧಿಕಾರಿಗಳಾದ ಡಾ.ಕೆ. ಪ್ರೇಮಕುಮಾರ, ವಾರ್ತಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಅಪ್ಪಾರಾವ್ ಅಕ್ಕೋಣಿ, ಸಿಬ್ಬಂದಿ, ಸಂಶೋಧನಾರ್ಥಿಗಳು, ಶಿಬಿರಾರ್ಥಿಗಳು ಇದ್ದರು.