

ವಿಜಯಪುರ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕ್ರಿಯಾತ್ಮಕ ಯೋಜನೆ ಹಮ್ಮಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಪಂ ಹಾಗೂ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಮತದಾರರ ಪ್ರತಿಜ್ಞಾವಿಧಿ ಕೋಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಶೇ.100 ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
ಅಲ್ಲದೆ, ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ವಲಸೆ ಹೋದ ಜನರಿಗೆ ಸಂಪರ್ಕಿಸಿ ಅವರಿಗೂ ಸಹ ಮತದಾನದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಜಿಲ್ಲೆಯ ಎಲ್ಲಡೆ ಮತದಾನ ಮಾಡುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮತದಾನದ ಪ್ರಮಾಣ ಹೆಚ್ಚಿಸಬೇಕೆಂದು ಹೇಳಿದರು.
ನಂತರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು.
ಪಾಲಿಕೆ ಆಯುಕ್ತ ಅಶಾದ ಉರ್ ರೆಹಮಾನ್ ಶರೀಫ್, ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್. ಮುಂಡರಗಿ, ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ, ತಹಸೀಲ್ದಾರ ಕವಿತಾ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ. ಅಲ್ಲಾಪೂರ, ರಾಜಶೇಖರ ಧೈವಾಡಿ, ಎಎಸ್ಒ ರಾವ್ ಬಹದ್ದೂರ್ ಬಾಗವಾನ, ಸುರೇಶ ಕೊಂಡಗುಳಿ, ಸುವರ್ಣ ಭಜಂತ್ರಿ, ವಿವಿಧ ಇಲಾಖೆಯ ಸಿಬ್ಬಂದಿ ವರ್ಗ ಮತ್ತಿತರರಿದ್ದರು.