

ಮುಂಡಗೋಡ: ಇಂದಿನ ಪರಿಸ್ಥಿತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಂದ ಆಗುವ ಲಾಭ ಹಾಗೂ ಮರೆಯಾಗುತ್ತಿರುವ ವಿವಿಧ ಕಲಾ ಪ್ರಕಾರಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಮಳಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಎನ್. ಹೆಗಡೆ ಹೇಳಿದರು.
ತಾಲೂಕಿನ ಮಳಗಿ ಗ್ರಾಮದ ಪಂಚವಟಿ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ 2025ನೇ ಸಾಲಿನ ನವೋದಯ ವಿದ್ಯಾಲಯ ಸಮಿತಿ ಹೈದರಾಬಾದ್, ಕರ್ನಾಟಕ ವಲಯ ಕಲಾ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಂಚವಟಿ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ರೇಖಾ ಮಾತನಾಡಿ, ಈ ಕಲಾ ಉತ್ಸವ ಮಕ್ಕಳಿಗೆ ತಮ್ಮಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ಅವಕಾಶವಾಗಿದೆ. ಇಂತಹ ಕಲಾ ಕೌಶಲ ಹಾಗೂ ಸೃಜನಶೀಲತೆಯನ್ನು ಪ್ರಸ್ತುತ ಪಡಿಸುವುದರಿಂದ ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ-ಸಂಪ್ರದಾಯಗಳ ಪುನರುಜ್ಜೀವನ ಮಾಡಲು ಸಹಕಾರಿಯಾಗಲಿದೆ ಎಂದರು.
ಕರ್ನಾಟಕ ವಲಯದ ಸುಮಾರು 20 ಜವಾಹರ ನವೋದಯ ವಿದ್ಯಾಲಯದ 190 ವಿದ್ಯಾರ್ಥಿಗಳು ಭಾಗವಹಿಸಿ ಆಯಾ ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸೃ್ಕಕ ಹಿರಿಮೆಯನ್ನು ಬಿಂಬಿಸುವ ವಿವಿಧ ಕಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಮಳಗಿ ಪಂಚವಟಿ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ರಾಘವನ್ ಕೆ.ಪಿ, ಕಲಾ ಉತ್ಸವದ ಸಂಚಾಲಕ ಕಲ್ಲಪ್ಪ ಹುಬ್ಬಳ್ಳಿ,ವಿರೇಂದ್ರ ಹಿರೇಮಠ ಮುಂತಾದವರಿದ್ದರು.ಮಾಲತೇಶ ಕಡತಿ ಮತ್ತು ಸುಜೇಶ ಕುಮಾರ ನಿರೂಪಿಸಿದರು. ಶಿಕ್ಷಕಿ ಜಯಲಕ್ಷ್ಮೀ ವಂದಿಸಿದರು.