

ಮುಂಡರಗಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪೌರ ನೌಕರರ ಸಂಘದ ಸ್ಥಳೀಯ ಪುರಸಭೆ ಶಾಖೆಯಿಂದ ಬುಧವಾರ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಹಾಗೂ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಸ್ಥಳೀಯ ಶಾಖೆ ಅಧ್ಯಕ್ಷ ಎಂ.ಎಂ. ದೊಡ್ಡಮನಿ ಮಾತನಾಡಿ, ಪೌರ ಕಾರ್ವಿುಕರನ್ನು ಸರ್ಕಾರಿ ನೌಕರರೆಂದು ಘೊಷಿಸಬೇಕು. ಕೆಜಿಆರ್ಡಿ ಜಿಪಿಎಫ್, ಜ್ಯೋತಿ ಸಂಜೀವಿನಿ ಸೇರಿ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. 25-30 ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬುರಾಜು ಸಿಬ್ಬಂದಿ, ಲೋಡರ್ಸ್, ಕ್ಲೀನರ್ಸ್, ಪೌರಕಾರ್ವಿುಕರು, ಸೂಪರ್ವೈಸರ್, ಕಂಪ್ಯೂಟರ್ ಆಪರೇಟರ್, ಜೂನಿಯರ್ ಪ್ರೋಗ್ರಾಮರ್, ಇನ್ನಿತರ ಗುತ್ತಿಗೆ/ ಹೊರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೇರಪಾವತಿ ವೇತನ ಮಾಡಬೇಕು. ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಲಗೈ ತೋಳಿಗೆ ಕಪ್ಪುಬಟ್ಟೆ ಧರಿಸಿ ಮುಷ್ಕರ ನಡೆಸುತ್ತಿದ್ದೇವೆ. ಮೇ 26ರೋಳಗಾಗಿ ಬೇಡಿಕೆಗಳು ಈಡೇರದಿದ್ದರೆ ಕಚೇರಿ ಹಾಗೂ ಸ್ವಚ್ಛತೆ ಕೆಲಸಗಳನ್ನು, ನೀರು ಸರಬರಾಜು ಮತ್ತು ಬೀದಿದೀಪ ನಿರ್ವಹಣೆ ಸ್ಥಗಿತಗೊಳಿಸಿ ಮೇ 27ರಿಂದ ಮುಷ್ಕರ ನಡೆಸಲಾಗುವುದು ಎಂದರು.
ಸಂಘದ ಜಿಲ್ಲಾ ಸಂಸ್ಕೃತಿ ಕಾರ್ಯದರ್ಶಿ ರವಿ ಕುಂಬಾರ, ಶಾಖೆ ಉಪಾಧ್ಯಕ್ಷ ಎ.ಎಫ್. ನದಾಫ್, ಮೈಲಪ್ಪ ದೊಡ್ಡಮನಿ, ರಣದಪ್ಪ ಹಿರೇಮನಿ, ಮಹಾಂತೇಶ ಹಿರೇಮನಿ, ನಿಂಗಪ್ಪ ಹರಿಜನ, ಮಂಜುಳಾ ಹಾಲಿನವರ, ಮುದುಕಪ್ಪ ಬಚನಹಳ್ಳಿ, ಲಕ್ಷ್ಮವ್ವ ಕವಲೂರ, ದೇವರಾಜ ಗೋಡಿ, ಗೌರವ್ವ ಹರಿಜನ ಇತರರಿದ್ದರು.