ಯುವಕರು ಸ್ಥಳೀಯವಾಗಿಯೇ ಕೆಲಸ ಮಾಡಲಿ

KLG UDHYOGA MELA
Published on

ಕಲಘಟಗಿ: ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ದೊರಕಿಸುವ ನಿಟ್ಟಿನಲ್ಲಿ ಲಾಡ್ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲಿನಲ್ಲಿ ಸಂತೋಷ ಲಾಡ್ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಡ್ ಫೌಂಡೇಷನ್ ವಿವಿಧ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅವುಗಳ ಪೈಕಿ ಉದ್ಯೋಗ ಮೇಳ ಒಂದಾಗಿದೆ. ಇದನ್ನು ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶಕ್ಕೆ ರಾಜಕಾರಣ ಅನಿವಾರ್ಯ. ರಾಜಕಾರಣ, ರಾಜಕಾರಣಿ, ಸರ್ಕಾರವನ್ನು ಯುವಕರು ಹತ್ತಿರದಿಂದ ಗಮನಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು ಎಲ್ಲವೂ ಸತ್ಯಾಸತ್ಯತೆಯಿಂದ ಕೂಡಿರಲ್ಲ. ಯಾವ ಸರ್ಕಾರ ಹೆಚ್ಚು ಜನಪರ ಕೆಲಸ ಮಾಡುತ್ತದೆ ಎಂದು ಗುರುತಿಸಿದರೆ ಅಂದು ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದರು.

ಯುವಕರು ದೇಶದ ಭವಿಷ್ಯದ ಹರಿಕಾರರು. ತಂದೆ-ತಾಯಂದಿರು ಕಷ್ಟಪಟ್ಟು ಮಕ್ಕಳಿಗೆ ಓದಿಸುತ್ತಾರೆ. ಉನ್ನತ ವ್ಯಾಸಂಗ ಮಾಡಿಯೂ ಸ್ಥಳೀಯವಾಗಿಯೇ ಕೆಲಸ ಮಾಡಬೇಕು ಎಂಬುದನ್ನು ಬಿಟ್ಟು ರಾಜ್ಯ, ಹೊರ ರಾಜ್ಯದಲ್ಲಿ ಕೆಲಸ ಸಿಕ್ಕರೆ ಖಂಡಿತವಾಗಿಯೂ ಹೋಗಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಸಚಿವರ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಪಪಂ ಸದಸ್ಯ ವೃಷಬೇಂದ್ರ ಪಟ್ಟಣಶೆಟ್ಟಿ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಬಾಬಣ್ಣ ಅಂಚಟಗೇರಿ, ನರೇಶ ಮಲೆನಾಡು, ಶ್ರೀಧರ ಪಾಟೀಲ ಕುಲಕರ್ಣಿ, ಸಹದೇವ ಚಲೋಜಿ, ಗಿರೀಶ ಅಂಗಡಿ, ಸಾದಿಕ್ ಲತ್ತೆಮ್ಮನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net