

ಹುನಗುಂದ: ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣ ಸಮೀಪ ಘಟ್ಟಿಗನೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಂಯೋಗದೊಂದಿಗೆ ಪ್ರಸಕ್ತ ಸಾಲಿನ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕಟ್ಟಡ ಹಾಗೂ ಕಾಂಪೌಂಡ್ ಉದ್ಘಾಟನೆ ಹಾಗೂ ಶ್ರೀ ಶುಕಮುನೇಶ್ವರ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಜತೆಗೆ ಈ ಹಿಂದಿನ ಚುನಾವಣೆ ಸಂದರ್ಭ ಭರವಸೆ ನೀಡಿದ್ದ ಗ್ರಾಮದಲ್ಲಿ ಮೂಲ ಸೌಲಭ್ಯಗಳು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈಡೇರಿಸಲಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮುಂದಿನ ದಿನಗಳಲ್ಲಿ ರಸ್ತೆ, ಗುಂಪು ಶೌಚಗೃಹ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.
ಇನ್ನು ಕೆಲವೇ ದಿನಗಳಲ್ಲಿ ಹುನಗುಂದ ಡಾಂಬರಿಕರಣ ಹಾಗೂ ನಾರಾಯಣಪುರ ಡ್ಯಾಮ್‌ದಿಂದ ಬೃಹತ್ ಯೋಜನೆಯಾದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಂಡು ತಮ್ಮ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ವಿವಿಧ ಸಮಾಜದ ಮುಖಂಡರು, ಗುರಿ ಹಿರಿಯರು, ಯುವಕರು, ಮಹಿಳೆಯರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಮಹಿಳೆಯರು ರಸ್ತೆ ಹಾಗೂ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವಂತೆ ಮನವಿ ನೀಡಿದರು.
ಸಂಗಯ್ಯ ಹಿರೇಮಠ, ತಾಪಂ ಇಒ ಮುರಳಿಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಗುತ್ತಿಗೆದಾರ ಅಮರಗುಂಡಪ್ಪ ಮೇಟಿ, ಬಿಂಕವಾಡಗಿ ಅಭಿವೃದ್ಧಿ ಅಧಿಕಾರಿ ಪ್ರವೀಣ ಕಂಚಿ, ಮುಖಂಡರಾದ ವೆಂಕನಗೌಡ ಆಗಸಿಮಂದಿನ, ಗವಿಸಿದ್ದಮ್ಮ ಬಾಲನಗೌಡ್ರ, ಅಮೀನಪ್ಪ ಸಂದಿಗವಾಡ, ಸಂಗನಬಸಪ್ಪ ಹುಲ್ಯಾಳ, ಜೈನಸಾಬ್ ಹಗೆದಾಳ, ಬಸವರಾಜ ಇಸ್ಲಾಂಪುರ, ಶಂಕರಗೌಡ ಆಗಸಿಮುಂದಿನ, ಹನುಮಗೌಡ ಹೊಸಮನಿ, ನಿಂಗಪ್ಪ ಗುರಿಕಾರ, ಎಸ್‌ಡಿಎಂಸಿ ಸದಸ್ಯರು ಇದ್ದರು.