

ವಿಜಯಪುರ : ಯುವಜನತೆ ನೌಕರಿ ಆಸೆಯಿಂದಾಗಿ ನಗರಗಳ ಕಡೆಗೆ ಮುಖ ಮಾಡುತ್ತಿದ್ದು, ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಿಡಗುಂದಿ ತಾಲೂಕಿನ ವಂದಾಲ ಗ್ರಾಮದಲ್ಲಿ ಶ್ರೀ ಚನ್ನಮಲ್ಲಪ್ಪ ಹೆಬ್ಬಾಳ ಸರ್ಕಾರಿ ಪದವಿ ಕಾಲೇಜು ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ಶೇ. 70 ರಿಂದ 80 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಅವರು ವ್ಯವಸಾಯವನ್ನೇ ಪ್ರಮುಖ ಉದ್ಯೋಗ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯೂ ಕೂಡ ಹೆಚ್ಚಿಸಬೇಕಿದೆ. ಸಾಗುವಳಿ ಜಮೀನು ಕಡಿಮೆ ಇದ್ದು, ಒಂದು ವೇಳೆ ಯುವಜನತೆ ಕೃಷಿಯಲ್ಲಿ ತೊಡಗಿಸಿಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಜನತೆ ಹಸಿವಿನಿಂದ ಬಳಲಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಜತೆಗೆ ಹಲವು ಉಪಕಸಬುಗಳಾದ ಎರೆಹುಳು ಗೊಬ್ಬರ ಉತ್ಪಾದನೆ, ಜೇನು ಸಾಕಣೆ, ಅಣಬೆ ಕೃಷಿ, ಆಡುಕುರಿ ಸಾಕಣೆ, ರೇಷ್ಮೆ ಕೃಷಿ ಮೂಲಕ ಯುವಕರು ಅದಾಯ ಹೆಚ್ಚಿಸಿಕೊಂಡು ಕೈತುಂಬ ಹಣ ಸಂಪಾದಿಸಬಹುದಾಗಿದೆ ಎಂದರು.
ಯುವ ಕೃಷಿಕ ಶೆಟ್ಟೆಪ್ಪ ನಾವಿ ಮಾತನಾಡಿ, ರೈತರು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಬೇಳೆ ಕಾಳು, ಎಣ್ಣೆ ಕಾಳು, ಸಿರಿಧಾನ್ಯ ಬೆಳೆಗಳನ್ನು ಬೆಳೆಯಬೇಕು. ಸಾವಯವದಲ್ಲಿ ಬೆಳೆದ ಉತ್ಪನ್ನಗಳನ್ನು ಬ್ರಾೃಂಡಿಂಗ್ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ರೇಷ್ಮಾ ರಾಠೋಡ ಮಾತನಾಡಿ, ಸದ್ಯದ ದಿನದಲ್ಲಿ ಹವಾಮಾನ ವೈಪರೀತ್ಯಗಳಿಂದಾಗುವ ನಷ್ಟ ತಪ್ಪಿಸಲು ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕೆಂದು ಸಲಹೆ ನೀಡಿದರು.
ಸಂಯೋಜಕ ಸುಭಾಸ ಡಿ. ಶಿಬಿರದ ಉದ್ದೇಶ ವಿವರಿಸಿದರು. ಮಹಮ್ಮದ್ ಯೂನಿಸ್, ಪ್ರೊ. ಎಂ. ನಂಜುಡಸ್ವಾಮಿ ಹಾಗೂ ಬನದೇವಿ ಮಮದಾಪೂರ ಮಾತನಾಡಿದರು. ಪ್ರಗತಿಪರ ರೈತರಾದ ಹನುಮಗೌಡ ಪಾಟೀಲ, ಮಲ್ಲಪ್ಪ ಹುಲಿಮನಿ, ಕಾಂತಯ್ಯ ಚಿಕ್ಕಮಠ, ಶಂಕರಯ್ಯ ಹಿರೇಮಠ, ಮಲ್ಲಪ್ಪ ಕೋಲಕಾರ, ಅಪ್ಪಣ್ಣ ಕಂಬಳಿ, ಪದ್ಮಾವತಿ ಗುಡಿ ವೇದಿಕೆಯಲ್ಲಿದ್ದರು.
ಅಮರೇಶ ಮಲಗೊಂಡ ಸ್ವಾಗತಿಸಿದರು. ವಿದ್ಯಾರ್ಥಿನಿ ರೂಪಾ ತಂಡದವರು ಪ್ರಾರ್ಥಿಸಿದರು. ಆಕಾಶ ಹೂಗಾರ ನಿರೂಪಿಸಿದರು. ನಾಗರತ್ನ ತಂಡದವರು ಎನ್‌ಎಸ್‌ಎಸ್ ಗೀತೆ ಹಾಡಿದರು.