

ಯಲ್ಲಾಪುರ: ಭವ್ಯ ಸಾಹಿತ್ಯ ಪರಂಪರೆ ಹೊಂದಿರುವ ಕನ್ನಡವನ್ನು ಅರಿತು, ಕನ್ನಡ ಪ್ರೀತಿ ಬೆಳೆಸಿಕೊಳ್ಳುವತ್ತ ಯುವ ಜನಾಂಗ ಚಿಂತನೆ ಮಾಡಬೇಕು ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.
ಕಸಾಪ ತಾಲೂಕು ಘಟಕ, ಸರ್ಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ಕಾರ್ತಿಕ ರಾಜ್ಯೋತ್ಸವದಲ್ಲಿ ‘ಕನ್ನಡ ಸಾಹಿತ್ಯ ಪರಂಪರೆ’ ಕುರಿತು ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ.ಜನಾರ್ದನ ಆರ್.ಡಿ ಮಾತನಾಡಿ, ಭಾಷೆ ಮತ್ತು ಸಾಹಿತ್ಯ ಒಂದಕ್ಕೊಂದು ಅವಿನಾಭಾವ ಸಂಬಂಧಿಸಿದೆ. ಸಾಹಿತ್ಯ ಪ್ರಾಕಾರದ ಕೃಷಿಗೆ ಭಾಷೆ ಮೂಲ ವಸ್ತುವಾಗಿರುತ್ತದೆ. ಸಾಹಿತ್ಯ ಕಾಲಘಟ್ಟದ ಜೀವನದ ಅನುಭವಗಳನ್ನು ನೀಡುತ್ತದೆ. ಭಾಷೆ ಮತ್ತು ಸಂಸ್ಕೃತಿ, ನೆಲ, ಜಲ ಉಳಿವಿಗಾಗಿ ಮಾಸ ಪೂರ್ತಿ ರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯುತ್ತದೆ ಎಂದರು.
ಪತ್ರಕರ್ತ ಶ್ರೀಧರ ಅಣಲಗಾರ, ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಸವಿತಾ ನಾಯಕ, ಶರತ ಕುಮಾರ, ಸುರೇಖಾ ತಡವಲ, ಇತರರಿದ್ದರು. ವೇದಾ ಭಟ್ಟ , ಕಾವ್ಯಶ್ರೀ ಮರಾಠಿ ಹಾಗೂ ಆಶಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.