

ಮಾನ್ವಿ: ದೇಶಕ್ಕಾಗಿ ಜೀವನವನ್ನೇ ಅರ್ಪಿಸಿದ ಸಂಗೊಳ್ಳಿ ರಾಯಣ್ಣನ ಆದರ್ಶಗಳು ಇಂದಿನ ಯುವಕರು ಪಾಲಿಸಬೇಕು ಎಂದು ತಿಂಥಣಿ ಬ್ರಿಡ್ಜ್ ಕಲಬುರ್ಗಿ ವಿಭಾಗದ ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಯುವಕರಿಗೆ ಕರೆ ನೀಡಿದರು.
ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಯುವ ಸಮುದಾಯ ಮದ್ಯಪಾನ ಹಾಗೂ ಜೂ ಜಾಟದಲ್ಲಿ ತೊಡಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಸಮುದಾಯದ ಯುವಕರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಏಳಿಗೆಗೆ ಮುಂದಾಗಬೇಕು ಎಂದರು.
ಇದನ್ನು ಓದಿ: ಕುರುಬರ ಸಂಘದ ನಿರ್ದೇಶಕರಿಗೆ ಸನ್ಮಾನ
ಸಂಘದ ರಾಜ್ಯ ಅಧ್ಯಕ್ಷ ಎಂ.ಈರಣ್ಣ ಮಾತನಾಡಿ, ಹಾಲುಮತ ಕುರುಬ ಸಮುದಾಯವು ಶೈಕ್ಷಣಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯಬೇಕಿದೆ. ನಾವೆಲ್ಲರೂ ಸಂಘಟಿತರಾಗುವುದು ಅವಶ್ಯವಾಗಿದೆ. ರಾಜ್ಯ ಕುರುಬರ ಸಂಘವು ಅರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಗತ್ಯವಾಗಿರುವ ವಸತಿ ನಿಲಯ ಹಾಗೂ ಅರ್ಥಿಕ ನೆರವನ್ನು ಕೂಡ ನೀಡುತ್ತಿದೆ ಎಂದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ತಾಲೂಕು ಅಧ್ಯಕ್ಷ ಸತ್ಯನಾರಾಯಣ ವಕೀಲ, ಮುಖಂಡರಾದ ಬಿ.ಕೆ.ಅಮರೇಶಪ್ಪ, ಮಲ್ಲನಗೌಡ ಪಾಟೀಲ್ ನಕ್ಕುಂದಿ, ಶರಣಪ್ಪಗೌಡ ನಕ್ಕುಂದಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಬಸವರಾಜ ಯರಮದೊಡ್ಡಿ, ಬಜ್ಜಣ್ಣ ಗುಡದಿನ್ನಿ, ಬೀರಪ್ಪ ಕಡದಿನ್ನಿ, ಡಾ.ವೆಂಕನಗೌಡ ಬೊಮ್ಮನಾಳ ಇತರರಿದ್ದರು.