

ಹೂವಿನಹಡಗಲಿ: ನಾಡಿನಲ್ಲಿ ಕನ್ನಡ ಭಾಷಿಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಮುಂದಿನ ಪೀಳಿಗೆಗೆ ಭಾಷೆ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.
ಇದನ್ನೂ ಓದಿ: ಕನ್ನಡದ ಕಂಪು ಪಸರಿಸುವ ಬಸವೇಶ್ವರ ದೇಗುಲ
ಪಟ್ಟಣದ ಜಿಪಿಜಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ಭಾಷೆಗೆ ಏಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಭಾಷಾವಾರು ಪ್ರಾಂತ್ಯವಾಗಿ ಉದಯಿಸಿ, ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಠತೆ ಹೊಂದಿದೆ. ಸಂಸ್ಕೃತಿ ಮತ್ತು ಕಲೆಗಳಿಂದ ನಾಡು ಶ್ರೀಮಂತಗೊಂಡಿದೆ. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಕನ್ನಡ ಭಾಷಾಭಿಮಾನ ಬೆಳೆಸಲು ಮುಂದಾಗಬೇಕು ಎಂದರು.
ತಾಪಂ ಇಒ ಉಮೇಶ್ ಮೈನಹಳ್ಳಿ ಮಾತನಾಡಿ, ಪ್ರಸ್ತುತ ಇಂಗ್ಲೀಷ್ ಭಾಷೆ ವ್ಯಾಮೋಹದಲ್ಲಿ ಕನ್ನಡ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ನಿತ್ಯ ಬಳಸುವ ಅನೇಕ ಪದಗಳು ಕನ್ನಡದಲ್ಲಿ ನುಡಿ ಬೆರಕೆಯಾಗಿವೆ. ಕನ್ನಡ ಉತ್ಸವಗಳು ತೋರಿಕೆಗಷ್ಟೇ ನಡೆಬಾರದು, ಸ್ವಾಭಿಮಾನದ ಸಂಕೇತವಾಗಿ ಆಚರಿಸಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಯಿತು.
ಕಸಾಪ ಅಧ್ಯಕ್ಷ ಟಿ.ಪಿ.ವೀರೇಂದ್ರ, ಸಿಪಿಐ ದೀಪಕ್ ಆರ್.ಬೂಸರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಆನಂದ್ ಡೊಳ್ಳಿನ್, ಸಿಡಿಪಿಒ ರಾಮನಗೌಡ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ ಅಶೋಕ್, ಬಿಇಒ ಮಹೇಶ್, ಪ್ರಾಚಾರ್ಯ ಕೋರಿ ಹಾಲೇಶ್, ನಿವೃತ್ತ ಶಿಕ್ಷಕ ಎಸ್.ಎಂ.ಕೂಡ್ಲಯ್ಯ ಪ್ರಮುಖರಾದ ಎ.ಕೊಟ್ರಗೌಡ ಇತರರಿದ್ದರು.