ಸಹಕಾರ ಕ್ಷೇತ್ರಕ್ಕೆ ಯುವಕರು ಹೆಜ್ಜೆ ಇಡಲಿ

1
ಹೊಸಕೋಟೆಯ ಎಸ್‌ಎ್ಸಿಎಸ್ ಸಹಕಾರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ರಾಜ್ಯ ಸಹಕಾರ ಮಂಡಳಿ ನಿರ್ದೇಶಕ ಕೆ.ಎಸ್.ಸುರೇಶ್ ಗೌಡ, ಬಮುಲ್ ಒಕ್ಕೂಟದ ಉಪಾಧ್ಯಕ್ಷ ಕೆಎಂಎಂ ಮಂಜುನಾಥ್ ಇದ್ದರು.
Published on

ಸಪ್ತಾಹದಲ್ಲಿ ಶಾಸಕ ಶರತ್ ಬಚ್ಚೇಗೌಡ ಹೇಳಿಕೆ -ನೂತನ ವಿಶ್ವವಿದ್ಯಾಲಯ ನಿರ್ಮಾಣದ ಪ್ರಸ್ತಾಪ

ಹೊಸಕೋಟೆ: ಸಹಕಾರ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಯುವಪೀಳಿಗೆಯನ್ನು ತೊಡಗಿಸಿಕೊಳ್ಳುವ ಕೆಲಸ ಆಗಬೇಕು ಎಂದು ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಎಸ್‌ಎ್ಸಿಎಸ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

4 ವರ್ಷಗಳಿಂದ ತಾಲೂಕಿನಲ್ಲಿ ಸಹಕಾರ ಕ್ಷೇತ್ರದ ಸುವರ್ಣ ಕಾಲ ನಡೆಯುತ್ತಿದ್ದು, ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದುವತ್ತ ದಾಪುಗಾಲು ಹಾಕುವ ಮೂಲಕ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯುವಶಕ್ತಿಯನ್ನು ಬಳಸಿಕೊಳ್ಳಬೇಕಿದೆ. ಯುವಕರನ್ನು ಸೆಳೆಯಲು ನೂತನ ವಿಶ್ವವಿದ್ಯಾಲಯ ನಿರ್ಮಾಣ, ಸಹಕಾರಿ ಸಂಬಂಧ, ತರಬೇತಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಸದಾವಕಾಶ ಹೊಂದಬಹುದಾಗಿದೆ. ಈ ಬಗ್ಗೆ ಸಹಕಾರ ಒಕ್ಕೂಟ ಸರ್ಕಾರದ ಬಳಿ ತಮ್ಮ ಪ್ರಸ್ಥಾವನೆ ಮಂಡಿಸಬೇಕಿದೆ ಎಂದು ತಿಳಿಸಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ.ಕೃಷ್ಣ ಮೂರ್ತಿ ಮಾತನಾಡಿ, 1994ರಲ್ಲಿ ಮೊದಲ ಬಾರಿಗೆ ಪೂಜೇನ ಅಗ್ರಹಾರದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡರು ಸಹಕಾರ ಸಂಘಗಳ ಬಗ್ಗೆ ಹೊಂದಿದ್ದ ಆಸಕ್ತಿ, ಇಂದು ತಾಲೂಕಿನಲ್ಲಿ ಬೃಹತ್ ಆಗಿ ಬೆಳೆಯಲು ಸಾಧ್ಯವಾಯಿತು. 2014ರಲ್ಲಿ ಎಸ್‌ಎ್ಸಿಎಸ್‌ನ ಅಧ್ಯಕ್ಷನಾಗಿ ಆಯ್ಕೆಯಾಗಿ, ಇದೀಗ ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಡಿಜಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಇದಕ್ಕೋಸ್ಕರ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪೂನಾ ಹಾಗೂ ಸೂರತ್‌ನಿಂದ ತಂತ್ರಜ್ಞರನ್ನು ಕರೆಸಿ, ಸಾಪ್ಟವೇರ್ ಅಳವಡಿಸಲಾಗಿದ್ದು, ಇದರಿಂದ ಸಹಕಾರ ಸಂಘದ ಹಣ ದುರ್ಬಳಕೆಯಾಗುವುದನ್ನು ಸಂಪೂರ್ಣವಾಗಿ ತಡೆಯಬಹುದಾಗಿದೆ ಎಂದರು. ಸಹಕಾರ ಮಂಡಳಿಯ ಜಿಲ್ಲಾಧ್ಯಕ್ಷ ಎ.ಸಿ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಸುಮಾರು 42 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ಇನ್ನೂ ಹೆಚ್ಚಿನ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಸಹಕಾರಿ ಕ್ಷೇತ್ರದ ವಿಚಾರವನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಲು ಸರ್ಕಾರಕ್ಕೆ ಮನವಿ

ಮಾಡಲಾಗುವುದು ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ.ಸತೀಶ್ ಗೌಡ, ಎಸ್.ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ, ಎಸ್‌ಎ್ಸಿಎಸ್ ಮುಖ್ಯ ಕಾರ್ಯನಿರ್ವಾಹಕ ನಾರಾಯಣ್ ಶರ್ಮ, ವ್ಯವಸ್ಥಾಪಕ ನಂಜುಂಡೇಗೌಡ ನಾಮ ನಿರ್ದೇಶಿತ ನಿರ್ದೇಶಕ ಎಲ್ ಆ್ಯಂಡ್ ಟಿ ಮಂಜುನಾಥ್ ಮತ್ತಿತರರು ಇದ್ದರು.

ನಗರಿಕರಣದ ಭರದಲ್ಲಿ ಸಹಕಾರ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಸಹಕಾರ ಸಂಘಗಳ ಸಂಖ್ಯೆ ವೃದ್ಧಿಸಬೇಕಿದ್ದು, ಇದರ ಬಗ್ಗೆ ಸಹಕಾರ ಸಂಘದ ನುರಿತರು ಮುಂದಾಗಬೇಕಿದೆ. ತಾಲೂಕಿನಲ್ಲಿ 40 ಕೋಟಿ ರೂ.ವೆಚ್ಚದಲ್ಲಿ ನೂತನ ಎಪಿಎಂಸಿ ನಿರ್ಮಾಣಕ್ಕೆ ಈಗಾಗಲೇ 35 ಎಕರೆ ಜಾಗ ಮಂಜೂರಾಗಿದೆ. ಕೆಪೆಕ್ ಸಂಸ್ಥೆಯಿಂದ ಶೀತಲ ಘಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ತಾಲೂಕಿನಲ್ಲಿ ಸಹಕಾರ ಸಂಘಗಳಿಂದ ನಿರ್ಮಾಣಕ್ಕೆ ಮುಂದಾದಲ್ಲಿ ಸರ್ಕಾರದಿಂದ ಮಂಜೂರಾತಿ ಹಾಗೂ ಅನುದಾನಗಳನ್ನು ಕೊಡಿಸುವ ಕೆಲಸ ಮಾಡಲಾಗುವುದು. -ಶರತ್ ಬಚ್ಚೇಗೌಡ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net