ಯುವಜನರು ದುಶ್ಚಟಗಳಿಂದ ದೂರವಿರಲಿ

ಶ್ರೀರಂಗಪಟ್ಟಣ ವ್ಯಾಪ್ತಿಯ ಗಂಜಾಂನ ಚಂದಗಾಲು ರಸ್ತೆಯಲ್ಲಿರುವ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಶ್ರೀರಂಗಪಟ್ಟಣ ವ್ಯಾಪ್ತಿಯ ಗಂಜಾಂನ ಚಂದಗಾಲು ರಸ್ತೆಯಲ್ಲಿರುವ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
Published on

ಶ್ರೀರಂಗಪಟ್ಟಣ: ಯಾರೇ ಒಬ್ಬ ವ್ಯಕ್ತಿ ಮಾದಕ ವ್ಯಸನಕ್ಕೆ ಒಳಪಟ್ಟಲ್ಲಿ ಅದು ಆತನಿಗೆ ಮಾತ್ರ ಹಾನಿ ಮಾಡುವುದಿಲ್ಲ, ಬದಲಿಗೆ ಸಂಪೂರ್ಣ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಈ ಬಗ್ಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಯುವ ಸಮಾಜ ಅರಿತು ಎಚ್ಚರ ವಹಿಸಬೇಕು ಎಂದು ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಆದರ್ಶ ಸಲಹೆ ನೀಡಿದರು.

ಪಟ್ಟಣ ವ್ಯಾಪ್ತಿಯ ಗಂಜಾಂನ ಚಂದಗಾಲು ರಸ್ತೆ ಬಳಿಯ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಗಾಂಜಾ, ಸಿಗರೇಟ್, ಗುಟ್ಕಾ, ಮದ್ಯ, ಡ್ರಗ್ಸ್ ಸೇರಿದಂತೆ ಮಾದಕ ವ್ಯಸನಕ್ಕೆ ತುತ್ತಾದ ವ್ಯಕ್ತಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾ ಬೀರುವ ಜತೆಗೆ ಆತನ ಕುಟುಂಬಗಳಲ್ಲಿ ಕಲಹಗಳು ಹೆಚ್ಚಾಗಿ ರಕ್ತ ಸಂಬಂಧದಲ್ಲಿನ ಮೌಲ್ಯಗಳಿಗೆ ಹಾನಿಗೊಳಿಸಿ ಕೊನೆಗೆ ಅಪರಾಧ ಕೃತ್ಯಕ್ಕೂ ಕಾರಣವಾಗುತ್ತದೆ. ಯುವ ವಿದ್ಯಾರ್ಥಿಗಳು ಈ ದುಶ್ಚಟಗಳಿಗೆ ಸಿಲುಕಿದರೆ ಶಿಕ್ಷಣ ಅಥವಾ ಕೆಲಸಗಳಲ್ಲಿ ಕಾರ್ಯಕ್ಷಮತೆ ಕುಗ್ಗುವಿಕೆ ಮತ್ತು ಸದೃಢ ಆರೋಗ್ಯ ಕಳೆದುಕೊಂಡು ಕ್ಯಾನ್ಸರ್, ಶ್ವಾಸಕೋಶಗಳ ಸಮಸ್ಯೆ, ಪಾರ್ಶ್ವವಾಯು, ಹೃದಯಾಘಾತದಂತಹ ದೈಹಿಕ ಸೇರಿದಂತೆ ಖಿನ್ನತೆ, ಭ್ರಮೆ, ಬುದ್ಧಿಮಾಂದ್ಯತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿ ಕೊನೆಗೆ ತೀವ್ರಕರ ಆರ್ಥಿಕ ಸಮಸ್ಯೆಗೂ ಕಾರಣವಾಗುತ್ತದೆ. ಇದರಿಂದ ವ್ಯಕ್ತಿ ಮಾತ್ರವಲ್ಲದೆ ಒಂದು ಕುಟುಂಬದ ಪ್ರತಿಯೊಬ್ಬ ಸದಸ್ಯರ ಸುಂದರ ಬದುಕನ್ನು ಸರ್ವನಾಶ ಮಾಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆ ಬೇಡವೇ ಬೇಡ ಎಂಬ ಘೋಷವಾಕ್ಯದಡಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 68 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾಗಿ ವಿವಿಧ ಬಣ್ಣಗಳೊಂದಿಗೆ ಕುಂಚ ಹಿಡಿದು ಕಲಾತ್ಮಕವಾಗಿ ವಿಶೇಷ ಚಿತ್ರ ರಚಿಸಿ ಜಾಗೃತಿ ಮೂಡಿಸಿದರು. ಸ್ಪರ್ಧೆಯಲ್ಲಿ ವಿಶೇಷ ಸಂದೇಶಗಳನ್ನು ನೀಡುವಂತ್ತಿದ್ದ ಚಿತ್ರ ರಚಿಸಿದ ವಿಜೇತ ದ್ವಿತೀಯ ಪಿಯು ವಿದ್ಯಾರ್ಥಿನಿ ಬಿಂದುಶ್ರೀಗೆ 1 ಸಾವಿರ ರೂ. ನಗದು ಬಹುಮಾನವನ್ನು ಸಂಸ್ಥೆ ಅಧ್ಯಕ್ಷ ಆರ್.ಆದರ್ಶ ನೀಡಿ ಪ್ರೋತ್ಸಾಹಿಸಿದರು.

ಮ್ಯಾನೆಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯ, ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಿ ಸ್ಪಂದನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net