ಯುವಕರು ಪರಿಸರ ರಕ್ಷಣೆಗೆ ಆದ್ಯತೆ ನೀಡಲಿ

24 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರ ಮಾಲಿನ್ಯ ಭಾರತ ಮಾತ್ರವಲ್ಲ ಇಡೀ ವಿಶ್ವವನ್ನೇ ಕಾಡುತ್ತಿರುವ ಜ್ವಲಂತ ಸಮಸ್ಯೆ. ಈ ಮಾಲಿನ್ಯ ಸಕಲ ಜೀವ ಜಂತುಗಳಿಗೆ ಕಂಟಕಪ್ರಾಯವಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಭಿಪ್ರಾಯಪಟ್ಟರು.
ತಾಲೂಕಿನ ವೀರಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪರಿಸರ ದಿನ ಹಾಗೂ ಶಾಲಾ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ರಕ್ಷಣೆ ಶ್ರದ್ಧಾ ಪೂರ್ವಕ ಕಾರ್ಯ ಎಂದು ಭಾವಿಸಬೇಕು. ಪರಿಸರ ಪ್ರಜ್ಞೆಯನ್ನು ಶಿಶು ಹಂತದಲ್ಲೇ ಬೆಳೆಸಿಕೊಳ್ಳಬೇಕು. ನಮಗೆ ಇರುವುದೊಂದೇ ಭೂಮಿ ಅದನ್ನು ಪ್ರತಿಯೊಬ್ಬರು ಹಸನಾಗಿಸಬೇಕು ಎಂದರು.
ವೀರಣ್ಣ ಒಡ್ಡೀನ ಅವರು ಪರಿಸರದ ಪ್ರಸ್ತುತ ಬಿಕ್ಕಟ್ಟುಗಳು ಕುರಿತು ಮಾತನಾಡಿ, ಪ್ಲಾಸ್ಟಿಕ್​ ಸಹ ಪರಿಸರಕ್ಕೆ ಮಾರಕವಾಗಿದ್ದು, ಇದು ಇಡೀ ಭೂಮಿಯನ್ನೇ ಕಸದ ತೊಟ್ಟಿಯನ್ನಾಗಿಸಿದೆ. ಪ್ಲಾಸ್ಟಿಕ್​ ಬಳಕೆ ತತ್ಕಾಲಕ್ಕೆ ಪ್ರಯೋಜನಕಾರಿ ಸರಿ. ಆದರೆ ದೀರ್ಘಾವಧಿಯಲ್ಲಿ ಕೆಡಕಿಗೆ ಮೂಲ. ವಿದ್ಯಾಥಿರ್ಗಳು ಕಾಯಾ, ವಾಚಾ, ಮನಸಾ ಪರಿಸರ ರಕ್ಷಣೆಗೆ ಬದ್ಧರಾಗಬೇಕು ಎಂದರು.
ಮಹಾಂತೇಶ ನರೇಗಲ್​ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕಿ ಮಂಗಳಗೌರಿ ಬಡಿಗೇರ, ಈರನಗೌಡ ಪಾಟೀಲ, ಭೀಮನಗೌಡ ಪಾಟೀಲ, ಆರ್​.ಆರ್​. ಪಾಟೀಲ, ಕೆ. ಪರಿಮಳಾ, ಎ.ಎ. ಬೆಣ್ಣಿ, ಸುವರ್ಣ ಪಾಟೀಲ, ಸುನಂದಾ ಹಳ್ಳೂರ, ಪ್ರಕಾಶ ಬಾಗಡೆ, ಇತರರು ಇದ್ದರು.
ಉಮಾದೇವಿ ಪಾಟೀಲ ಸ್ವಾಗತಿಸಿದರು. ಸ್ಮಿತಾ ವಡಗಾವೆ ನಿರೂಪಿಸಿದರು. ಸುರೇಶ ಮುಗಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net