

ಸರಗೂರು: ಕ್ರೀಡಾಕೂಟಗಳಲ್ಲಿ ಯುವಕರು ಭಾಗವಹಿಸುವ ಮೂಲಕ ತಮ್ಮಲ್ಲಿ ಅಡಗಿರುವ ಪ್ರತಿಭೆ ತೋರಿಸಬೇಕು ಎಂದು ಪಪಂ ಸದಸ್ಯೆ ಚಂದ್ರಕಲಾ ರಾಜಣ್ಣ ತಿಳಿಸಿದರು.
ಹಿರಿಯ ವಾಲಿಬಾಲ್ ಆಟಗಾರ ಎಸ್.ಎಲ್. ರಾಜಣ್ಣ ಅವರ ಸ್ಮರಣಾರ್ಥವಾಗಿ ಇತ್ತೀಚೆಗೆ ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಣ್ಣ ಅವರು ವಾಲಿಬಾಲ್ ಆಟಗಾರರು. ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಯಾವುದೇ ಗ್ರಾಮೀಣ ಭಾಗದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆದರೆ ಆ ಯುವ ಆಟಗಾರರಿಗೆ ಸಹಾಯಧನ ಹಾಗೂ ಸ್ಫೂರ್ತಿ ನೀಡಿ ಪ್ರೋತ್ಸಾಹಿಸಿ ಕಳುಹಿಸಿಕೊಡುತ್ತಿದ್ದರು.
ಯುವಕರಿಗೆ ಸರಿಯಾದ ಕ್ರೀಡಾ ತರಬೇತಿ ದೊರಕಿದರೆ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳುತ್ತಾರೆ. ಕ್ರೀಡೆಯಲ್ಲಿ ಭಾಗವಹಿಸಬೇಕಾದರೆ ಆಸಕ್ತಿ ಮುಖ್ಯ. ಜಿಲ್ಲೆಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಹೆಚ್ಚು ಕ್ರೀಡಾಪಟುಗಳನ್ನು ಹೊರತರುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಪಪಂ ಮಾಜಿ ಅಧ್ಯಕ್ಷ ಹಾಗೂ ಆದಿ ಕರ್ನಾಟಕ ಮಹಾಸಭಾಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯದಲ್ಲಿ ಹೆಚ್ಚು ಲಾಭ ಗಳಿಸಬಹುದು. ಕ್ರೀಡೆಯಲ್ಲಿ ಭಾಗವಹಿಸಿ ದೊಡ್ಡ ಸಾಧನೆ ಮಾಡಬಹುದು. ಗೆಲುವು-ಸೋಲು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪಪಂ ಸದಸ್ಯ ಶ್ರೀನಿವಾಸ ಮಾತನಾಡಿ, ಹಿರಿಯ ವಾಲಿಬಾಲ್ ಆಟಗಾರ ರಾಜಣ್ಣ ಪಟ್ಟಣದಲ್ಲಿ ಆಟವಾಡುವ ಸಮಯದಲ್ಲಿ ವಿವಿಧ ಭಾಗಗಳಿಂದ ತಂಡಗಳು ಬರುತ್ತಿದ್ದರು. ಈ ಹಿಂದೆ ಸಾಕಷ್ಟು ಕ್ರೀಡೆ ಆಯೋಜಿಸಲಾಗುತ್ತಿತ್ತು. ಈಗ ಯುವಕರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದರು.
ವಾಲಿಬಾಲ್ ಪಂದ್ಯದಲ್ಲಿ ಗಂಗೋತ್ರಿ ಬಾಯ್ಸ ಪ್ರಥಮ ಸ್ಥಾನ ಪಡೆದು ಟ್ರೋಫಿ ತನ್ನದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಸರಗೂರು ಎವೈಸಿ ತಂಡ ಪಡೆಯಿತು. ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ವಿಷ್ಣು ಸೇನಾ ಸಮಿತಿ ಉಪಾಧ್ಯಕ್ಷ ಶಂಭು, ಮುಖಂಡ ದೊಡ್ಡಬೈರ, ಪಂದ್ಯಾವಳಿ ಆಯೋಜಕ ರಾಮ್ ಕುಮಾರ್, ಸಂತೋಷ್, ಜಗದೀಶ್ ಇತರರು ಇದ್ದರು.