

ಸಿಂಧನೂರು: ಹುತಾತ್ಮ ಯೋಧರ ಸ್ಮರಣೆ, ಯುವಕರಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸವಾಗಬೇಕು ಎಂದು ಯೋಧ ಚನ್ನಬಸವ ಬಾದರ್ಲಿ ಹೇಳಿದರು.
ನಗರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಗಿಲ್ ವಿಜಯ ಸುಲಭವಾಗಿ ದೊರೆತಿಲ್ಲ. ಸಾವಿರಾರು ಸೈನಿಕರು ಸಾಕಷ್ಟು ಕಷ್ಟ ನೋವು ಅನುಭವಿಸಿದ್ದಾರೆ. 527 ಸೈನಿಕರು ಹುತಾತ್ಮರಾಗಿದ್ದಾರೆ. ಮೂರು ತಿಂಗಳು ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ಶಕ್ತಿಮೀರಿ ಹೋರಾಡಿ ಗೆಲುವು ತಂದು ಕೊಟ್ಟಿದ್ದಾರೆ. ಆ ಸವಿನೆನಪಿಗಾಗಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದ್ದೇವೆ. ಯುವಜನತೆ ಸೈನ್ಯ ಸೇರಲು ಮುಂದಾಗಬೇಕು. ದೇಶದ ರಕ್ಷಣೆಗೆ ಕಂಕಣ ಬದ್ಧರಾಗಬೇಕು ಎಂದರು.
ಪ್ರಮುಖ ಬೀರಪ್ಪ ಶಂಭೋಜಿ ಮಾತನಾಡಿದರು. ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಿದ್ದಪ್ಪ ಬಸರಕೋಡ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಪತ್ತಾರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಶ್ರೀ ಅಂಬಾದೇವಿ ಗೈಡ್ಸ್ ಘಟಕದ ಗೈಡ್ ಕ್ಯಾಪ್ಟನ್ ಬಸಮ್ಮ ಹಿರೇಮಠ, ಅಕ್ಕಮಹಾದೇವಿ ಗೈಡ್ಸ್ ಮುಕ್ತ ಘಟಕದ ಗೈಡ್ ಕ್ಯಾಪ್ಟನ್ ಸೌಜನ್ಯ ಹಿರೇಮಠ ಇದ್ದರು. ಸ್ಕೌಟ್ಸ್, ಗೈಡ್ಸ್ ಹಾಗೂ ವಿದ್ಯಾರ್ಥಿಗಳು ಸೈನಿಕರೊಂದಿಗೆ ಸಂವಾದ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಆಚರಣೆ: ದೇಶದ ಪ್ರೇಮ ಮೆರೆಯುವುದರ ಮೂಲಕ ನಮ್ಮ ವೀರಯೋಧರನ್ನು ಸ್ಮರಿಸಿ ಗೌರವಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಹೇಳಿದರು.
ನಗರದ ಗಂಗಾವತಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರದ ಸಾರ್ವಭೌಮತೆ ರಕ್ಷಿಸಲು ಭಾರತದ ಯೋಧರು ಮೆರೆದ ಪರಾಕ್ರಮದ ಐತಿಹಾಸಿಕ ದಿನವೇ ಕಾರ್ಗಿಲ್ ವಿಜಯ್ ದಿವಸ್. ಕಾರ್ಗಿಲ್‌ನಲ್ಲಿ ಪಾಕಿಸ್ತಾನವನ್ನು ಸದೆಬಡೆದು ನಮ್ಮ ನೆಲವನ್ನು ರಕ್ಷಿಸಿದ ವೀರಯೋಧರನ್ನು ಸ್ಮರಿಸಬೇಕು. ಅವರ ತ್ಯಾಗ ಬಲಿದಾನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ ್ಷಸಿದ್ರಾಮೇಶ ಮನ್ನಾಪುರ, ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ್, ಪ್ರಮುಖರಾದ ಪ್ರಕಾಶ, ಯಮನೇಗೌಡ, ಮುತ್ತು ಬರಸಿ, ಸಹನಾ ಹಿರೇಮಠ, ಶಿವಕುಮಾರ ಇತರರಿದ್ದರು.