

ಕುಮಟಾ: ಯುವಶಕ್ತಿಯೇ ದೇಶದ ಪ್ರಬಲ ಶಕ್ತಿಯಾಗಿದ್ದು, ದೇಶವನ್ನು ಸದೃಢ ಹಾಗೂ ಸುಭದ್ರಗೊಳಿಸುವಲ್ಲಿ ಯುವಶಕ್ತಿಯ ಪಾತ್ರ ಮಹತ್ವದ್ದಾಗಿದೆ. ದೇಶದ ರಾಜಕೀಯ ಸ್ಥಿರತೆ-ಘನತೆ ಹೆಚ್ಚಿಸಲು ಯುವಶಕ್ತಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಭವ್ಯ ಭಾರತದ ನಿರ್ವಣಕ್ಕೆ ಕೈ ಜೋಡಿಸಬೇಕು ಎಂದು ಕವಿವಿ ಸಿಂಡಿಕೇಟ್ ಸದಸ್ಯ ಹಾಗೂ ಕಾರವಾರದ ಶಿವಾಜಿ ಬಿಇಡಿ ಕಾಲೇಜ್ನ ನಿವೃತ್ತ ಪ್ರಾಚಾರ್ಯ ಶಿವಾನಂದ ನಾಯಕ ಹೇಳಿದರು.
ಇಲ್ಲಿನ ಡಾ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಹಿತ್ಯ, ಕ್ರೀಡೆ, ಎನ್ಸಿಸಿ, ಎನ್ಎಸ್ಎಸ್, ಸಾಂಸ್ಕೃತಿಕ ಸ್ಪರ್ಧೆಗಳು ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚು ತೊಡಗಿಸಿಕೊಳ್ಳಬೇಕು. ಇಂದಿನ ಜ್ಞಾನಯುಗದ ಎಲ್ಲ ಸ್ಪರ್ಧೆಗಳಲ್ಲಿ ಯಶಸ್ಸನ್ನು ಗಳಿಸಲು ಪ್ರಯತ್ನಿಸಬೇಕು ಎಂದರು.
ಕೆನರಾ ಕಾಲೇಜ್ ಸೊಸೈಟಿ ಕಾರ್ಯಾಧ್ಯಕ್ಷ ಹನುಮಂತ ಕೆ. ಶಾನಭಾಗ ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈಯಲು ಪೂರಕವಾದ ಪ್ರೋತ್ಸಾಹ ಹಾಗೂ ಸಹಕಾರ ನೀಡಲಿದೆ ಎಂದರು.
ಪ್ರಾಚಾರ್ಯ ಡಾ.ಎನ್.ಡಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಹರಿಕಾಂತ, ವಿದ್ಯಾರ್ಥಿ ಯೂನಿಯನ್ ಕಾರ್ಯದರ್ಶಿ ವಿಕಾಸ ನಾಯ್ಕ, ದೀಪಾ ಪೈ, ಆಶ್ರಿತಾ ನಾಯಕ ಉಪಸ್ಥಿತರಿದ್ದರು. ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಕ್ರೀಡೆ ಹಾಗೂ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯೂನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ ಸ್ವಾಗತಿಸಿ ಪರಿಚಯಿಸಿದರು. ಪೊ. ತೃಪ್ತಿ ನಾಯ್ಕ ಹಾಗೂ ಪೊ. ನಿಖಿತಾ ಹುಲಸ್ವಾರ್ ಕಾರ್ಯಕ್ರಮ ನಿರ್ವಹಿಸಿದರು.