ಯುವ ಸಮೂಹ ಪಾಲಕರ ತ್ಯಾಗ ಅರಿಯಲಿ

10Kush05
ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕುಶಾಲನಗರದಲ್ಲಿ ಬೃಹತ್ ವಾಕಥಾನ್ ನಡೆಯಿತು.
Published on

ಕುಶಾಲನಗರ: ತಂದೆ-ತಾಯಿ ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳ ಭವಿಷ್ಯಕ್ಕಾಗಿ ಮಾಡುವ ತ್ಯಾಗವನ್ನು ಇಂದಿನ ಯುವ ಯುವ ಸಮೂಹ ಮರೆಯಬಾರದು ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಸಲಹೆ ನೀಡಿದರು.


ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಭಾನುವಾರ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ವಾಕಥಾನ್ ಉದ್ದೇಶಿಸಿ ಮಾತನಾಡಿದರು.
ಪೊಲೀಸರು ಕಷ್ಟಪಟ್ಟು ಹಿಡಿದ ಡ್ರಗ್ ಪೇಡೆಲರ್‌ಗಳನ್ನು ಬಿಡಿಸಲು ಯಾವುದೇ ವಕೀಲರು ಮುಂದೆ ಬರಬಾರದು. ಯುವಕರ ಜೀವನದ ಜತೆ ಚೆಲ್ಲಾಟವಾಡುವ ಇಂತಹ ಸಮಾಜದ್ರೋಹಿಗಳನ್ನು ಜೀವನ ಪಯರ್ಂತ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು. ಯುವ ಸಮೂಹ ಜಾಗೃತವಾಗಬೇಕು ಎಂದು ಕಿವಿಮಾತು ಹೇಳಿದರು.


ಡ್ರಗ್ಸ್ ಬಳಸುವುದರಿಂದ ಜೀವನ ಹಾಳಾಗುತ್ತದೆ. ಅದರಿಂದಾಗಿ ಅವರ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಡ್ರಗ್ಸ್ ದಂಧೆ ಮಾಡುವವರ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ಪೊಲೀಸ್ ಇಲಾಖೆ ಗೌಪ್ಯವಾಗಿಡುತ್ತದೆ. ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಲು ಮನವಿ ಮಾಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಸಾರ್ವಜನಿಕವಾಗಿ ಧೂಮಪಾನ ಮಾಡುವುದನ್ನು ಕಾಣುತ್ತಿದ್ದೆವು. ಈಗ ಅದಕ್ಕೆಲ್ಲ ದಂಡ ವಿಧಿಸಿ, ಸಾರ್ವಜನಿಕವಾಗಿ ಧೂಮಪಾನ ಮಾಡುವುದನ್ನು ತಪ್ಪಿಸುವಲ್ಲಿ ಇಲಾಖೆ ಸಾಕಷ್ಟು ಯಶಸ್ವಿಯಾಗಿದೆ. ಡ್ರಗ್ಸ್ ಮುಕ್ತ ಮಾಡಲು ಸಹ ಪೊಲೀಸ್ ಇಲಾಖೆಯೊಂದಿಗೆ ಜವಾಬ್ದಾರಿಯುತ ನಾಗರಿಕ ಸಮಾಜ ಕೈಜೋಡಿಸಿದರೆ ಮಾತ್ರ ಸಾಧ್ಯವಾಗಲಿದೆ ಎಂದರು.

ಎಎಸ್ಪಿ ಸುಂದರ್ ರಾಜ್, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಇನ್‌ಸ್ಪ್ಪೆಕ್ಟರ್‌ಗಳಾದ ರಾಕೇಶ್, ಪ್ರಕಾಶ್, ಗ್ರಾಮಾಂತರ ಠಾಣಾಧಿಕಾರಿ ಮೋಹನ್‌ರಾಜ್, ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ಅಧ್ಯಕ್ಷ ರವೀಂದ್ರ ರೈ, ಕಾರ್ಯದರ್ಶಿ ಕೆ.ಎಸ್.ನಾಗೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುಮನ್ ಬಾಲಚಂದರ್, ರೋಟರಿ ಅಧ್ಯಕ್ಷೆ ಸುನೀತಾ ಮಹೇಶ್, ಜೆಸಿಐ ಸಂಸ್ಥೆಯ ಸಂಪತ್, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಕೊಡಗು ಪೊಲೀಸರು ಮತ್ತಿತರ ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net