

ಸಂಶಿ: ಸಾವಯವ ಕೃಷಿ ಬಗ್ಗೆ ಇಂದಿನ ಯುವಪೀಳಿಗೆಗೆ ಸರಿಯಾಗಿ ತಿಳಿದುಕೊಳ್ಳಬೇಕು. ವಿಷಯುಕ್ತ ಆಹಾರ ಸೇವನೆಯಿಂದ ದೂರ ಇರಬೇಕು. ಬೆಳೆಗಳಿಗೆ ಕೀಟನಾಶಕ ಸಿಂಪರಣೆ ಮಾಡುವ ವಿಧಾನವನ್ನು ಬದಲಾಯಿಸಿಕೊಳ್ಳಬೇಕು ಎಂದು ಶ್ರೀ ಜಗದ್ಗುರು ಫಕೀರೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಈರಣ್ಣ ಮಹಾಂತಪ್ಪ ಕೋರಿ ತಿಳಿಸಿದರು.
ಸಂಶಿ ಗ್ರಾಮದ ಎಂಪಿಕೆ ಇಂಡಸ್ಟ್ರೀಜ್ ಹಾಲ್ನಲ್ಲಿ ಶ್ರೀ ಜಗದ್ಗುರು ಫಕೀರೇಶ್ವರ ಸೌಹಾರ್ದ ಸಹಕಾರಿ ಸಂಘದ ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪಾರಂಪರಿಕ ಕೃಷಿ ಚಿಂತನೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ಪಾರಂಪರಿಕ ಕೃಷಿ ಪದ್ಧತಿ ದೇಶವನ್ನು ಬದಲಾವಣೆಯತ್ತ ಸಾಗುವಂತೆ ಮಾಡುತ್ತದೆ. ಇಂದಿನ ಯುವಕರು ಕೃಷಿಯತ್ತ ಗಮನಹರಿಸಿ ಜೀವನಮಟ್ಟವನ್ನು ವೃದ್ಧಿಸಿಕೊಳ್ಳಬೇಕು. ಪಾರಂಪರಿಕ ಹಳೆಯ ಸಾವಯವ ಕೃಷಿಯ ಹಾದಿಯಲ್ಲೇ ಆಧುನಿಕ ಪದ್ಧತಿಗಿಂತ ವಿಭಿನ್ನವಾದದ್ದು ಎಂದರು.
ಪಾರಂಪರಿಕ ಕೃಷಿಕ ಮಲ್ಲೇಶಪ್ಪ ಬಿಸೇರೊಟ್ಟಿ ಮಾತನಾಡಿ, ‘ರೈತನ ಗತ್ತು ದೇಶಕ್ಕೆ ಗೊತ್ತು’ ಸಾವಯವ ಕೃಷಿಯಲ್ಲಿ ಅದೆಷ್ಟೋ ಮಹನೀಯರು ಸಾಧನೆ ಮಾಡಿದ್ದಾರೆ. ಮೊದಮೊದಲು ಉತ್ತಮ ಫಲ ದೊರಕದಿದ್ದರೂ ಮುಂದೊಂದು ದಿನ ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ಇಂದಿನ ಯುವ ಪೀಳಿಗೆ ಕೃಷಿಯತ್ತ ಹೆಚ್ಚು ಗಮನಹರಿಸಬೇಕು ಎಂದರು.
ಎ.ಬಿ. ಉಪ್ಪಿನ, ಪರಮೇಶ್ವರಪ್ಪ ಸುತಾರ, ಬಸವರಾಜ ಬಿಂಕದಕಟ್ಟಿ, ಹನುಮಂತಪ್ಪ ಸನಾದಿ, ಶಿವಾನಂದ ಹರಕುಣಿ, ಸುರೇಶ ರಡ್ಡೇರ, ಲತಾ ಅಂಗಡಿ, ಫಕೀರೇಶ ಪಶುಪತಿಹಾಳ, ಮಂಜುನಾಥ ಸೊರಟಿ, ರವಿ ಸೂಲದ, ಶಿವಪ್ಪ ಶೆರೇವಾಡ, ಬಸವರಾಜ ಅಂಗಡಿ, ವಿಜಯಲಕ್ಷ್ಮೀ ಕೋರಿ, ಇತರರು ಉಪಸ್ಥಿತರಿದ್ದರು.