

ಅಥಣಿ ಗ್ರಾಮೀಣ: ಯುವಜನರು ಕ್ರೀಡೆಯಲ್ಲಿ ತೊಡಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಸೀತಾಗಿರಿಯ ಸೀತಾಗಿರಿಮಠದ ಪೀಠಾಧೀಶ ಡಾ. ಎ.ಸಿ.ವಾಲಿ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕಬಡ್ಡಿ ಗ್ರಾಮೀಣ ಪ್ರದೇಶದ ಅಚ್ಚುಮೆಚ್ಚಿನ ಆಟ. ಯುವಜನರು ಕಬಡ್ಡಿಯಲ್ಲಿ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸಬೇಕು. ಶಿಕ್ಷಣ ಜತೆಗೆ ಕ್ರೀಡೆಯಲ್ಲೂ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ ಅವಕಾಶವಿದ್ದು, ಲಾಭ ಪಡೆದುಕೊಳ್ಳಬೇಕು ಎಂದರು.
ಮುಖಂಡ ಬಸಪ್ಪ ಚನ್ನಾಪುರ ಮಾತನಾಡಿ, ಜಾಗತಿಕ ಮಟ್ಟದಲ್ಲಿ ರಾಷ್ಟ್ರ ಪ್ರತಿನಿಧಿಸುವಂತಹ ಅವಕಾಶ ಇರುವುದು ಕೇವಲ ಕ್ರೀಡೆಯಲ್ಲಿ ಮಾತ್ರ. ಕ್ರೀಡೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲದೆ ಶಿಸ್ತು, ಬದ್ಧತೆ ಮತ್ತು ದೃಢತೆ ಅಳವಡಿಸಿಕೊಳ್ಳುವ ಸಾಧನವಾಗಿದೆ ಎಂದರು.
ಬೆಳಗ್ಗೆ ಬಸವೇಶ್ವರ ಗದ್ದುಗೆಗೆ ಮಹಾಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಸೀತಾಗಿರಿ ಪೀಠಾಧೀಶ ಡಾ. ಎ.ಸಿ. ವಾಲಿ ಮಹಾರಾಜರು ಪ್ರವಚನ ನೀಡಿದರು. ಮರಡಿ ಬಸವೇಶ್ವರರ ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು.
ಮುಖಂಡರಾದ ಬಸಪ್ಪ ಖೋತ, ಮಹಾದೇವ ಗಲಗಲಿ, ಪಾಂಡು ಭೋಸಲೆ, ಬಾಬು ಹುಲ್ಯಾಳ, ನಿಂಗಪ್ಪ ನಾಯಿಕ, ಚಂದ್ರಶೇಖರ ಬೆಳ್ಳಂಕಿ, ಬಸವರಾಜ ನಾಯಿಕ, ಶಿವಾಜಿ ಭೋಸಲೆ, ಅಶೋಕ ಮೂಡಲಗಿ, ಸಿದ್ದಪ್ಪ ತೇಲಿ, ಮುರಿಗೆಪ್ಪ ಬೆಳ್ಳಿಗೇರಿ, ಶಂಕರಯ್ಯ ಹಿರೇಮಠ, ಗುರು ಖೋತ, ಶಶಿಧರ ಖೋತ, ಶೀಕ ಯಲಡಗಿ, ಶ್ರೀಶೈಲ ಖೋತ ಇತರರಿದ್ದರು.