

ದೇವದುರ್ಗ: ಪಟ್ಟಣ ಸೇರಿ ತಾಲೂಕಾದ್ಯಂತ ಭಾನುವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಇಲಾಖೆ ಕಚೇರಿ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಯಿತು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮಾತನಾಡಿ, ಸ್ವಾತಂತ್ರ್ಯ ನಂತರ ಎಲ್ಲ ರಾಜ್ಯಗಳನ್ನು ಒಗ್ಗೂಡಿಸಿ ಸಂವಿಧಾನವನ್ನು ಅಂಗೀಕರಿಸಲಾಯಿತು. ಇದರ ನೆನಪಿಗಾಗಿ ಪ್ರತಿವರ್ಷ ಜ.26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಯುವಕರು ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದರು. ಶಿರಸ್ತೇದಾರ್ ವೆಂಕಟೇಶ, ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಉಮೇಶ, ಅಭಿಷೇಕ ಇತರರಿದದರು.
ತಾಪಂ ಕಚೇರಿಯಲ್ಲಿ ಇಒ ಬಸವರಾಜ ಹಟ್ಟಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿ, ಭಾರತದ ಸಂವಿಧಾನ ಪ್ರಜೆಗಳಿಗೆ ಸಮಾನ ನ್ಯಾಯ, ಸ್ಥಾನಮಾನ, ಅವಕಾಶ ನೀಡಿದೆ. ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಕಾಯ್ದೆ, ಕಾನೂನು ತಿಳಿದುಕೊಂಡರೆ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಬಹುದು ಎಂದರು. ಎಡಿ ಅಣ್ಣಾರಾವ್ ನಾಯಕ, ನರೇಗಾ ಸಹಾಯಕ ನಿರ್ದೇಶಕಿ ಮಹೇಶ್ವರಿ, ಬಸವರಾಜ ನಾಗೋಲಿ, ನರಸಪ್ಪ, ಮಾರ್ಕಂಡೇಯ, ತಾಯಪ್ಪ ಇದ್ದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಟಿಎಚ್‌ಒ ಬನದೇಶ್ವರ, ಪೊಲೀಸ್ ಠಾಣೆಯಲ್ಲಿ ಪಿಐ ಎಸ್.ಮಂಜುನಾಥ, ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಕೆ.ಹಂಪಯ್ಯ, ಕೃಷಿ ಇಲಾಖೆಯಲ್ಲಿ ಎಡಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಿಇಒ ಮಲ್ಲಿಕಾರ್ಜುನ ಧ್ವಜಾರೋಹಣ ನೆರವೇರಿಸಿದರು. ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.