ಯುವಕರು ಹೋರಾಟದ ಮನೋಭಾವ ಬೆಳೆಸಿಕೊಳ್ಳಲಿ

2
ಮಾಗಡಿಯ ವಾಸವಿ ವಿದ್ಯಾಪೀಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಕಲ್ಪತರು ವಿಭಾಗೀಯ 12ನೇ ಸಮ್ಮೇಳನವನ್ನು ರಾಮಕೃಷ್ಣ-ವಿವೇಕಾನಂದ ಅಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಎಚ್.ಸಿ.ಬಾಲಕೃಷ್ಣ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ರವಿಶಂಕರ್ , ಮಾಗಡಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ರಮೇಶ್ ಗುಪ್ತ, ಶಬರೀಶ್ ಇದ್ದರು.
Published on

ಆರ್ಯವೈಶ್ಯ ಯುವಜನ ಮಹಾಸಭಾ ಸಮ್ಮೇಳನದಲ್ಲಿ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಕರೆ

ಮಾಗಡಿ : ಭಾರತೀಯ ಆರ್ಯವೈಶ್ಯ ಸಮಾಜ ರಾಷ್ಟ್ರಮಟ್ಟದಲ್ಲಿ ಸಮ್ಮೇಳನ ನಡೆಸಲಿ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ವಾಸವಿ ವಿದ್ಯಾಪೀಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಕಲ್ಪತರು ವಿಭಾಗೀಯ 12ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವು ಪ್ರಪಂಚದ ಒಳಿತಿಗೆ ಸಾಕಷ್ಟು ಕೊಡುಗೆ ನೀಡಿದೆ. ಅಂದಿನಿಂದ ಇಲ್ಲಿಯವರೆಗೂ ಅಸಾಮಾನ್ಯತೆ ಮೆರೆದಿದೆ. ವೇದಕಾಲದಲ್ಲೇ ಸಮಾಜಕ್ಕೆ ಇನ್ನಿಲ್ಲದ ಕೊಡುಗೆ ನೀಡುತ್ತಿದೆ ಎಂದರು. ಯುವಕರು ಸಂಘಟಿತರಾಗಿ ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಿ. ಆರ್ಯವೈಶ್ಯ ಸಮುದಾಯದ ಕೊಡುಗೆ ಏನು ಎಂದು ತಿಳಿದುಕೊಳ್ಳಿ. ಶಿಸ್ತು ಜೀವನ ಸಾಧಿಸಿ ಸಮಾಜದ ಎಲ್ಲ ವರ್ಗಗಳಿಗೂ ಮೋಕ್ಷ ಸಾಧಿಸುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಮಾರ್ಗದರ್ಶಕರಾಗಿ ಎಂದು ಕರೆ ನೀಡಿದರು.

ಆರ್ಯವೈಶ್ಯರು ಮಡಿವಂತಿಕೆ ಬಿಟ್ಟು, ವ್ಯಾಪಾರ, ಉದ್ದಿಮೆ ಭೂಮಂಡಲದಲ್ಲಿ ವಿಸ್ತಾರವಾಗಲಿ. ದಕ್ಷಿಣ ಅಮೆರಿಕಾದಲ್ಲಿ 6 ಸಾವಿರ ವರ್ಷಗಳ ಹಿಂದೆಯೇ ಈ ಸಮುದಾಯದವರು ವ್ಯಾಪಾರ ಮಾಡುತ್ತಿದ್ದರು. ಭಾರತೀಯ ಕೌಟುಂಬಿಕ ಮೌಲ್ಯಗಳನ್ನು ಪಾಲಿಸಿಕೊಂಡು ಬಂದ ಇತಿಹಾಸ ಈ ಸಮುದಾಯಕ್ಕಿದೆ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಎಲ್ಲ ಸಮಾಜಗಳು ಸಂಘಟಿತರಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಆಲೋಚನೆಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸಂಘಟನೆ ಬಹಳ ಮುಖ್ಯ. ಸಂಘಟನೆ ಇದ್ದರೆ ಮಾತ್ರ ಸಾಧನೆ ಮಾಡಬಹುದು ಎಂದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ರವಿಶಂಕರ್ ಮಾತನಾಡಿ, ನಾವು ಮೊದಲು ಭಾರತೀಯರು, ಹಿಂದು ಧರ್ಮಿಯರು, ನಂತರ ವೈಶ್ಯಸಮಾಜದವರು. ಯುವ ಜನತೆ ದೇಶದ ಬೆನ್ನೆಲುಬು, ಮುಂದಾಲೋಚನೆ, ದೂರಾಲೋಚನೆ ಇದ್ದಕಡೆ ಅಭಿವೃದ್ಧಿ ಕಟ್ಟಿಟ್ಟ ಬುತ್ತಿ ಎಂದರು.

ದಾಬಸ್ ಪೇಟೆ ಬಳಿ 8 ಎಕರೆ ವಿಸ್ತೀರ್ಣದಲ್ಲಿ 62 ವರ್ಷದಿಂದ ಶಾಲೆ ಇದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ಹಾಕಲು ನೆಲಮಂಗಲ ಶಾಸಕ ಶ್ರೀನಿವಾಸ್ ಬಿಡುತ್ತಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಸಮಾಜದ ಆಸ್ತಿ ನಾವು ರಕ್ಷಣೆ ಮಾಡಿಕೊಳ್ಳಲು. ಬೇರೆಯವರ ಬಳಿ ಬೀಕ್ಷೆಬೇಡುವಂತಾಗಿದೆ ಎಂದರೆ ಸಮಾಜಕ್ಕೆ ಶಕ್ತಿ ಯಾರು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಪ್ರಶ್ನಿಸಿದರು.

ಯುವ ಜನ ಅಧ್ಯಕ್ಷ ಎಸ್.ಸುನೀಲ್, ಮಾಗಡಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ರಮೇಶ್ ಗುಪ್ತ, ಶಬರೀಶ್, ಯುವ ಜನ ಸಂಘದ ಗೌರವಾಧ್ಯಕ್ಷ ಬಿಎಂ.ಸ್ವರೂಪ್, ಅಧ್ಯಕ್ಷ ಎಸ್.ಆರ್.ರಜತ್, ಕಾರ್ಯದರ್ಶಿ ಬಾಲಾಜಿ, ಪಿ.ರಶ್ವಂತ್, ಪೋಟೋ ಬಾಬು, ಜೆ.ಅಮರ್ ನಾಥ್, ಮೀರಾ ಶಿವಕುಮಾರು, ಪುರಸಭಾ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net