

ವಿರಾಜಪೇಟೆ: ವಿರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘದ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ಕೊಡಗು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರಂತ ಮಹಾನ್ ಯೋಧರನ್ನು ಕೊಡುಗೆಯಾಗಿ ನೀಡಿದ ವೀರರ ಜಿಲ್ಲೆ. ಈ ಹಿಂದೆ ಕೊಡಗಿನಲ್ಲಿ ಸೈನ್ಯಕ್ಕೆ ಮಕ್ಕಳನ್ನು ಕಳುಹಿಸುವುದೆಂದರೆ ಅದೊಂದು ಪ್ರತಿಷ್ಠೆ, ಹೆಮ್ಮೆಯಾಗಿತ್ತು. ಹೀಗಾಗಿ ಕೊಡಗಿನ ಪ್ರತಿ ಮನೆಯ ಒಬ್ಬರಾದರೂ ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯದಲ್ಲಿದ್ದರು. ಕೊಡಗಿನವರ ಮನೆಗಳಲ್ಲಿ ದೇಶ ರಕ್ಷಣೆ ಬಗ್ಗೆ ಒಂದಿಲ್ಲೊಂದು ವೀರ ಕಥೆಗಳಿರುತ್ತಿದ್ದವು. ಇಂತಹ ಒಂದು ಹೆಮ್ಮೆಯ ಜಿಲ್ಲೆ ನಮ್ಮ ಕೊಡಗು. ಯುವಜನತೆ ಹೆಚ್ಚು ಸೈನ್ಯಕ್ಕೆ ದೇಶ ರಕ್ಷಣೆಗೆ ಪಣ ತೊಡಬೇಕು ಎಂದು ಹೇಳಿದರು.
ರೈತರು, ಸೈನಿಕರು, ಕಾರ್ಮಿಕರು ದೇಶದ ಪ್ರಮುಖ ನಾಯಕರು. ಈ ಮೂವರ ಸಹಕಾರವಿಲ್ಲದೇ ನಮ್ಮ ಪ್ರತಿನಿತ್ಯದ ಕಾರ್ಯ ನಡೆಯುವುದು ಅಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಎನ್‌ಎಸ್‌ಎಸ್, ಎನ್‌ಸಿಸಿ ಸೇರಿಕೊಳ್ಳಬೇಕು. ಆಗ ಮಾತ್ರ ಅವರಲ್ಲಿ ಮನೋದೃಢತೆ ಬೆಳೆಯುತ್ತದೆ. ಸಮಾಜದಲ್ಲಿ ನಾವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಮುನ್ನಡೆ ಸಾಧಿಸಿದ್ದೇವೆ. ಆದರೆ ನೈತಿಕವಾಗಿ ಕುಸಿದಿದ್ದೇವೆ ಎಂದರು.
ಲೆಪ್ಟಿನೆಂಟ್ ಕರ್ನಲ್ ಒಲಿಂಪಿಯನ್ ಬಾಳೆಯಡ ಕೆ.ಸುಬ್ರಹ್ಮಣಿ ಮಾತನಾಡಿ, ನಿಜವಾದ ಸೈನಿಕರೆಂದರೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರ ತಾಯಿ ಮತ್ತು ಪತ್ನಿಯಾಗಿರುತ್ತಾರೆ. ದೇಶ ರಕ್ಷಣೆಗೆ ಅಂತ ಮನೆಯಲ್ಲಿನ ಪುರುಷರು ತೆರಳಿದ್ದಾಗ ಒಬ್ಬ ಗಟ್ಟಿಗಳಾಗಿ ಹೆಣ್ಣು ಮನೆಯ ಎಲ್ಲ ವ್ಯವಸ್ಥೆಗಳನ್ನು ನೋಡಿಕೊಂಡು ಸಂಸಾರ ಸಾಗಿಸುತ್ತಾರೆ. ಅವರಿಗೆ ಈ ಕೀರ್ತಿ ಸಲ್ಲಬೇಕು. ಪಾಲಕರು ತಮ್ಮ ಮಕ್ಕಳಲ್ಲಿ ಶಿಕ್ಷಣದ ಜತೆ ದೇಶ ಪ್ರೇಮ ಬೆಳೆಸಬೇಕು ಎಂದರು.
ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪನಿರೀಕ್ಷಕ ಮಹೇಶ್ ಕುಮಾರ್ ಮಾತನಾಡಿ, ದೇಶದ ಗಡಿ ಕಾಯುವ ಮಿಲಿಟರಿ ಪಡೆಗಳು ಭಾರತೀಯರಿಗೆ ನೀಡುವ ರಕ್ಷಣೆ, ಅವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿ. ನೆಮ್ಮದಿ ಇರಬೇಕಾದರೆ ಭದ್ರತೆ ಇರಬೇಕು. ರಕ್ಷಣೆ ಎಂಬುದು ಎಲ್ಲರಿಗೂ ಆತ್ಮವಿಶ್ವಾಸ ನೀಡುತ್ತದೆ. ಇಂತಹ ತೃಪ್ತಿಯನ್ನು ಸೈನಿಕರು ದೇಶದ ಜನರಿಗೆ ನೀಡುತ್ತಿದ್ದಾರೆ ಎಂದರು.
ಮೇ.ಆ.ಬಾಚಿಮಂಡ ಕಾರ್ಯಪ್ಪ, ಕರ್ನಲ್ ಪುಟ್ಟಿಚಂಡ ಗಣಪತಿ, ದುದ್ದಿಯಂಡ ಹಸೈನಾರ್ ಸೂಫಿ, ಚಪ್ಪಂಡ ಕಾರ್ವ ಹರೀಶ್, ಕಟ್ಟೇರ ವಿಶ್ವನಾಥ್, ನೆಲ್ಲಮಕ್ಕಡ ಜಪ್ಪು ಮುದ್ದಯ್ಯ, ಎಂ.ಕೆ.ಸಲಾಂ, ತೋರೇರ ಪೂವಯ್ಯ, ನಾಮೇರ ನವೀನ್, ಮುಕ್ಕಾಟ್ಟೀರ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ, ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರಾದ ಚೇಂದ್ರಿಮಾಡ ಕೆ. ನಂಜಪ್ಪ, ಎಂ.ಕೆ. ಸಲಾಂ, ಪಟ್ರಪಂಡ ಎಂ.ಕರುಂಬಯ್ಯ, ಕೊಂಗಂಡ ಎ. ಭೀಮಯ್ಯ, ಅಣ್ಣಾಳಮಾಡ ಡಿ. ಸುಬ್ಬಯ್ಯ, ಬಾಳೆಕುಟ್ಟೀರ ಎ. ಬೋಪಯ್ಯ, ಅಪ್ಪಯ್ಯ ಹೆಚ್.ಕೆ. ಕಬ್ಬಚ್ಚಿರ ಎ. ಬೋಪಣ್ಣ, ಪಟ್ರಪಂಡ ಎ. ಚಂಗಪ್ಪ ಉಪಸ್ಥಿತರಿದ್ದರು.