

ಸಾಗರ: ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತವನ್ನು ಪಡೆದವರ ಹಾರೈಕೆ ರಕ್ತದಾನಿಗಳ ಮೇಲೆ ಸದಾ ಇರುತ್ತದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ನಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಭಾನುವಾರ ವಿಶ್ವಹಿಂದು ಪರಿಷತ್, ಭಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿಯಿಂದ ರೋಟರಿ ಸಂಸ್ಥೆ ಸಹಯೋಗದಲ್ಲಿ ವೀರಸಾವರ್ಕರ್ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ, ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇಶಪ್ರೇಮಿ ವೀರಸಾವರ್ಕರ್ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ವೀರಸಾವರ್ಕರ್ ಕುರಿತು ನಮ್ಮ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ. ಯುವಜನರು ರಕ್ತದಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಮದುವೆ, ಹುಟ್ಟುಹಬ್ಬ ಇನ್ನಿತರೆ ಸಂದರ್ಭದಲ್ಲಿ ರಕ್ತದಾನ ಮಾಡುವ ಸಂಪ್ರದಾಯ ಬೆಳೆಯಬೇಕು ಎಂದು ಸಲಹೆ ನೀಡಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಭಾರತ ಮಾತೆಯನ್ನು ಸ್ಮರಿಸುತ್ತಲೆ ಹುತಾತ್ಮರಾದ ವೀರಸಾವರ್ಕರ್ ಆದರ್ಶ ದೇಶಭಕ್ತ. ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳ ನಿರಂತರವಾಗಿ ರಕ್ತದಾನ ಮಾಡುತ್ತಾ ಬಂದಿದೆ. ಸಾಗರ, ಶಿವಮೊಗ್ಗಕ್ಕೆ ಸಹ ತುರ್ತು ಸಂದರ್ಭದಲ್ಲಿ ನಮ್ಮ ಸಂಘಟನೆಯ ಯುವಕರು ತೆರಳಿ ರಕ್ತದಾನ ಮಾಡಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡರಿಂದ ಮೂರು ಬಾರಿ ರಕ್ತದಾನ ಶಿಬಿರ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಡಾ. ಬಿ.ಜಿ.ಸಂಗಮ್, ಸಂತೋಷ್ ಶಿವಾಜಿ, ರಾಜೇಂದ್ರ ಪೈ, ಶಾಂತಕುಮಾರ್, ಅಶ್ವಥ್ ಇತರರಿದ್ದರು.