ಸಮಾಜ ಸೇವೆಗೆ ಯುವಕರು ಮುಂದಾಗಲಿ

12 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜ ಸೇವೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಅಂತೆಯೇ ಎಲ್ಲ ಇಲಾಖೆಗಳಿಗಿಂತ ಪೊಲೀಸ್​ ಇಲಾಖೆ ಪ್ರಮುಖವಾಗಿದೆ ಎಂದು ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.

ನಗರದ ಕ್ಲಾಸಿಕ್​ ಇಂಟರ್​ ನ್ಯಾಷನಲ್​ ಶಾಲೆ ಆವರಣದಲ್ಲಿ ಕ್ಲಾಸಿಕ್​ ಕೆಎಎಸ್​, ಐಎಎಸ್​ ಸ್ಟಡಿ ಸರ್ಕಲ್​ ವತಿಯಿಂದ ಆಯೋಜಿಸಿದ್ದ ಪಿಎಸ್​ಐ ಮತ್ತು ಪೊಲೀಸ್​ ಕಾನ್​ಸ್ಟೇಬಲ್​ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್​ ಇಲಾಖೆಯಲ್ಲಿ ಪಿಎಸ್​ಐ ಹಾಗೂ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆಗೆ ನೇಮಕವಾಗಿದ್ದು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ. ದೊರೆತ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲಾಖೆ ಗೌರವ ಹೆಚ್ಚಿಸಬೇಕಿದೆ ಎಂದರು.

ಶಂಕರ ಬೆಳ್ಳುಬ್ಬಿ ಮಾತನಾಡಿ, ಸಮಾಜದ ರಕ್ಷಣೆಗೆ ನಿಮಗೆ ದೊರೆತ ಈ ಹುದ್ದೆಯನ್ನು ಬಳಸಿಕೊಳ್ಳಿ. ಇತರರಿಗೆ ಮಾದರಿಯಾಗಿ ಎಂದರು.

ಶ್ರೀ ಜಗದ್ಗುರು ಗುರು ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ಹುದ್ದೇಯಲ್ಲಿದ್ದರೂ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಪೊಲೀಸ್​ ಇಲಾಖೆಯಲ್ಲಿ ನಿಮ್ಮ ಸೇವೆ ಆದರ್ಶವಾಗಿರಲಿ ಎಂದರು.

ಕ್ಲಾಸಿಕ್​ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಕ್ಲಾಸಿಕ್​ ಸಂಸ್ಥೆ 27 ವರ್ಷಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಿದೆ. ಈವರೆಗೆ ತರಬೇತಿ ಪಡೆದ ಅಭ್ಯರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕವಾಗಿದ್ದಾರೆ ಎಂದರು.

ಕ್ಲಾಸಿಕ್​ ಸಂಸ್ಥೆಯಲ್ಲಿ ತರಬೇತಿ ಪಡೆದ 50ಕ್ಕೂ ಹೆಚ್ಚು ಪಿಎಸ್​ಐ ಹಾಗೂ 50ಕ್ಕೂ ಪೊಲೀಸ್​ ಕಾನ್​ಸ್ಟೇಬಲ್​ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು. ಸಾಧಕರು ತಮ್ಮ ಯಶಸ್ಸಿನ ಅನುಭವಗಳನ್ನು ಹಂಚಿಕೊಂಡರು.

ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಪ್ರಕಾಶಕಿ ರೇಣುಕಾ ಉಪ್ಪಾರ, ಕ್ಲಾಸಿಕ್​ ಸಂಸ್ಥೆ ಶೈಣಿಕ ಸಲಹೆಗಾರ ಪ್ರೊ. ಎಂ.ವೈ. ಸಾವಂತ, ಎಸಿಪಿ ಪ್ರಶಾಂತ ಸಿದ್ದನಗೌಡರ, ಇತರರು ಇದ್ದರು.

ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net