ಯುವ ಜನರು ಸಂಸ್ಕಾರ-ಸಂಸ್ಕೃತಿ ಕಲಿಯಲಿ

20 gkp 06
Published on

ಗೋಣಿಕೊಪ್ಪ: ಪೊನ್ನಂಪೇಟೆಯ ಕೊಡವ ಎಜುಕೇಷನ್ ಸೊಸೈಟಿ ಅಧೀನಕ್ಕೊಳಪಡುವ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ-50ರ ಸಂಭ್ರಮ, ಕನ್ನಡ ರಾಜ್ಯೋತ್ಸವನ್ನು ಇತ್ತೀಚೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶ್ರೀ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗುವ ಮೂಲಕ ಅತಿಥಿ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಯನ್ನಾಡಿದ ಸಿಐಪಿಯು ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ, ಕನ್ನಡ ನಾಡು-ನುಡಿಯ ಪ್ರಾಚೀನತೆ ಮತ್ತು ಶ್ರೀಮಂತ ಕವಿ ಪರಂಪರೆಯ ಬಗ್ಗೆ ತಿಳಿಸಿಕೊಟ್ಟರು.

ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಜಾನಪದ ಕಲೆ, ಸಂಸ್ಕೃತಿಯನ್ನು ಇಂದಿನ ಪೀಳಿಗೆ ಕಲಿಯಬೇಕು, ಮುಂದಿನ ತಲೆಮಾರಿಗೆ ರವಾನಿಸಬೇಕು, ಆಗ ಮಾತ್ರ ಜಾನಪದ ಕಲೆ ಜೀವಂತವಾಗಿ ಉಳಿಯಲು ಸಾಧ್ಯ. ಮಾತೃಭಾಷೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು ಎಂದು ಹೇಳಿದರು.

ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಚಿರಿಯಪಂಡ ರಾಜನಂಜಪ್ಪ, ಎ.ಎಸ್.ಧಮೇರ್ಂದ್ರ ಕುಮಾರ್ ಮಾತನಾಡಿದರು.

ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿಮಾಚಯ್ಯ ಮತ್ತು ಪಿಎಚ್.ಡಿ ಪದವಿ ಪಡೆದ ಸಿಐಪಿಯು ಕಾಲೇಜಿನ ಉಪನ್ಯಾಸಕಿ ಪಿ.ವಿ.ಸುಶ್ಮಿತಾ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿ ಅನಿಷಾ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು.

ಪ್ರಬಂಧ, ಭಾಷಣ, ಭಾವಗೀತೆ, ಜಾನಪದ ಗೀತೆ, ಗಾಯನ ಸ್ಪರ್ಧೆ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net