

ವಿರಾಜಪೇಟೆ: ವಿರಾಜಪೇಟೆಯ ಕೊಡವ ಪೊಮ್ಮಕ್ಕಡ ಒಕ್ಕೂಟದ ಕಾಳಕ್ಕ ತಂಡದ ವತಿಯಿಂದ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ನಮ್ಮೆಯನ್ನು ಇತ್ತೀಚೆಗೆ ಆಚರಿಸಲಾಯಿತು.
ತಂಡದ ಮುಖ್ಯಸ್ಥೆ ಮುಕ್ಕಾಟಿರಾ ಬೀನಾ ಪ್ರಸನ್ನ ಮಾತನಾಡಿ, ಎಲ್ಲರೂ ಒಂದು ಕಡೆ ಒಗ್ಗೂಡುವ ಮೂಲಕ ಸಾಂಪ್ರದಾಯಿಕ ನಮ್ಮೆಯನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ಸಾಂಪ್ರದಾಯಿಕ ಆಚರಣೆಗಳನ್ನು ಆಚರಿಸಿ ಮುಂದುವರಿಸಿಕೊಂಡು ಹೋಗುವಂತಾಗಬೇಕು. ಯುವ ಪೀಳಿಗೆಗೂ ಹಬ್ಬಗಳ ಆಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿಯೂ ಒಕ್ಕೂಟದಿಂದ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕೈಲ್ ಪೋಳ್ದ್ ನಮ್ಮೆಯ ಪ್ರಯುಕ್ತ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾಣತಂಡ ಬೀನಾ ಜಗದೀಶ್, ದ್ವಿತೀಯ ಬಹುಮಾನ ಪಡೆದ ಪಟ್ರಪಂಡ ರೇಖಾ ನೀಲಮ್ಮ, ತೃತೀಯ ಬಹುಮಾನ ಪಡೆದ ಬಯವಂಡ ಇಂದಿರಾ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಮುರುವಂಡ ಉಷಾ ಮಾತನಾಡಿದರು. ಪೊಮ್ಮಕ್ಕಡ ಒಕ್ಕೂಟದ ಬ್ಯಾನರ್ ಹಾಗೂ ದೀಪವನ್ನು ನೀಲಕ್ಕ ತಂಡದವರಿಗೆ ಹಸ್ತಾಂತರಿಸಲಾಯಿತು. ಮನೆಯಲ್ಲಿಯೇ ತಯಾರಿಸಿದ ಖಾದ್ಯಗಳು, ತಿನಿಸುಗಳು, ಪುಸ್ತಕಗಳು ಹಾಗೂ ಕಾಂಪ್ಲಿಮೆಂಟ್ ಕವರ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಸೀಮಾ, ಪರದಂಡ ಸುಶೀಲಾ, ನೆಲ್ಲಮಕ್ಕಡ ವಿದ್ಯಾ ಕುಟ್ಟಪ್ಪ, ಕುಂಜಿರ ಚಿತ್ರಾ, ಮೂಕೊಂಡ ಪ್ರೀತ್ ಈರಪ್ಪ, ತಾತಂಡ ಏಸು ಕಬೀರ್, ಕಾಣತಂಡ ಬೀನಾ ಜಗದೀಶ್, ಮೂಳೆರ ಆಶಾ ಉಮೇಶ್ ಇತರರು ಇದ್ದರು.