ಯುವ ಜನಾಂಗ ನೈತಿಕತೆ ಉಳಿಸಿಕೊಳ್ಳಲಿ

KMT SUJAN BODHA
Published on

ಕುಮಟಾ: ಶಿಕ್ಷಣ ಕೇವಲ ಉದ್ಯೋಗ, ಹಣ ಗಳಿಕೆಗೆ ಅಲ್ಲ, ಸಾಧನೆ ಮತ್ತು ಬದುಕಿನ ಸಾರ್ಥಕತೆಗೆ ಶಿಕ್ಷಣ ಬೇಕು. ಶರೀರ, ಬುದ್ಧಿ, ಮನಸ್ಸನ್ನು ನೈತಿಕವಾಗಿ ಬಳಸಿದಾಗ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತುಮಕೂರಿನ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸುಜ್ಞಾನ ಬೋಧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಹಿಂದು ಬಹುದೇವ ಆರಾಧಕರಲ್ಲದಿದ್ದರೂ, ಬಹುರೂಪಿ ದೇವರ ಆರಾಧಕರು. ಹಿರಿಯರು ಹೇಳಿದ ಒಳ್ಳೆಯ ಕಾರ್ಯ ಮಾಡಲು ಯೋಚಿಸಬೇಕಾಗಿಲ್ಲ. ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬಂತೆ ನಾವು ಬದುಕಬೇಕು. ಬದುಕಿನಲ್ಲಿ ಕೀಳರಿಮೆ ಸಲ್ಲ, ಶಾರೀರಿಕ ಶುಚಿತ್ವ, ನಿಯಮಿತ ವ್ಯಾಯಾಮ, ಉಲ್ಲಸಿತ ಮನಸ್ಸು ಬದುಕಿನ ಯೋಗವನ್ನು ಬದಲಾಯಿಸುತ್ತದೆ. ತಾಯಿ-ತಂದೆ, ಗುರುಗಳನ್ನು ಗೌರವಿಸಬೇಕು. ಯುವ ಜನಾಂಗ ನೈತಿಕತೆಯನ್ನು ಉಳಿಸಿಕೊಳ್ಳಬೇಕು. ಯೋಚನೆ ಮತ್ತು ಕ್ರಿಯೆಯಲ್ಲಿ ಚಾರಿತ್ರ್ಯವಂತರಾಗಬೇಕು. ಶ್ರದ್ಧೆಯಿಂದ ವಿದ್ಯೆ ಕಲಿಯಬೇಕು ಎಂದರು.

ಪರಮಾನಂದ ಸ್ವಾಮೀಜಿ ಮಾತನಾಡಿ, ಮನಸ್ಸು, ಹೃದಯ ಸ್ವಚ್ಛವಾಗಬೇಕು. ಉತ್ತಮ ವಿಚಾರಗಳನ್ನು ಗ್ರಹಿಸಬೇಕು. ಜ್ಞಾನವೇ ಶಕ್ತಿ. ಉನ್ನತ ಗುರಿ ಮತ್ತು ಗುರಿಯೆಡೆಗೆ ಸತತ ಪ್ರಯತ್ನ ಬೇಕು. ಸಂಕಲ್ಪದಲ್ಲಿ ಸ್ವಾರ್ಥ ಇರಬಾರದು ಎಂದರು.

ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಸ್ವಾಗತಿಸಿ ಪರಿಚಯಿಸಿದರು. ಟ್ರಸ್ಟಿ ರಮೇಶ ಪ್ರಭು, ಡಿ.ಡಿ. ಕಾಮತ, ವನವಾಸಿ ಕಲ್ಯಾಣ ಕೇಂದ್ರದ ಶ್ರೀದೇವಿ ಹೆಗಡೆ, ಆರ್.ಎಸ್. ಹೆಗಡೆ, ವಸಂತ ಭಟ್ಟ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರ ಆರ್. ಎಚ್. ದೇಶಭಂಡಾರಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಸರಸ್ವತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಕಿರಣ ಭಟ್ಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net