ಯುವ ಪೀಳಿಗೆಗೆ ಹೇಮರಡ್ಡಿ ಮಲ್ಲಮ್ಮ ಆದರ್ಶ ತಿಳಿಯಲಿ: ಡಾ.ಡಿ.ಎಸ್.ಗುರು

Published on

ಮೈಸೂರು: ನಮ್ಮ ಮುಂದಿನ ಪೀಳಿಗೆಗೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಆದರ್ಶ ತಿಳಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ತಿಳಿಸಿದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಳಗದ ಏಳನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ.ಶಿವರಾತ್ರೀಶ್ವರ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಆದರ್ಶ ಗೃಹಿಣಿ ಪ್ರಶಸ್ತಿ ಪ್ರದಾನ ಹಾಗೂ ಬಳಗದವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಯುವ ವೇದಿಕೆ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮ ಆದರ್ಶ ಗೃಹಿಣಿ ಮಾತ್ರವಲ್ಲದೆ, ಸಮಾಜದ ನೊಂದ ಜನರಿಗೆ ಸಹಾಯ ಮಾಡುವ ಮೂಲಕ ಸಮಾಜಸೇವೆ ಮಾಡಿದರು. ಕುಟುಂಬದಲ್ಲಿಯೇ ಎದುರಾದ ದೌರ್ಜನ್ಯ ಎದುರಿಸಿ ಧಾರ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಎಂದು ಸ್ಮರಿಸಿದರು.

ಮನುಷ್ಯನ ಚಿಂತನೆಗಳು ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಆದರ್ಶ ವ್ಯಕ್ತಿಗಳ ಕುರಿತು ಇಂತಹ ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಬೇಕು ಎಂದು ಹೇಳಿದರು.

ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಶಶಿಕಲಾ ವಸ್ತ್ರದ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಡಾ.ಜಿ.ಎಂ.ವಾಮದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಗದ ಗೌರವಾಧ್ಯಕ್ಷ ಡಾ.ಟಿ.ತಿಪ್ಪೇಸ್ವಾಮಿ, ಸಂಚಾಲಕರಾದ ಆರ್. ಶಾರದಾ ಶಿವಲಿಂಗಸ್ವಾಮಿ ಇತರರು ಇದ್ದರು.

ಶಿವರುದ್ರಮ್ಮ, ಶಿವಲಿಂಗಮ್ಮ, ಡಾ.ನಾಗಲಕ್ಷ್ಮಿ ಭಟ್ಟಾಚಾರ್ಯ ಅವರಿಗೆ ಆದರ್ಶ ಗೃಹಿಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಪ್ರೇರಣಾ, ಡಾ.ಬಿ.ಟಿ.ರೋಹನ್, ಖುಷಿ ಅನನ್ಯ, ಶಶಾಂಕ್ ರೆಡ್ಡಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net