ವಿಜಯಪುರ : ಮೊಬೈಲ್ ಗೀಳಿನಿಂದ ಯುವ ಪೀಳಿಗೆ ಹೊರಬರಲಿ

DSC_5724
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಜರುಗಿದ ಕಾರ್ಯಕ್ರಮದಲ್ಲಿ ಐದು ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು. ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿರಕ್ತಮಠದ ಅಭಿನವ ಸಿದ್ದಲಿಂಗ ದೇವರು, ಜಯಲಕ್ಷ್ಮಿ ಪಾಟೀಲ್, ಡಾ.ವನಿತಾ ತೊರವಿ, ಬಿ.ಆರ್.ಬನಸೋಡೆ ಮತ್ತಿತರರಿದ್ದರು
Published on

ವಿಜಯಪುರ : ಮೊಬೈಲ್‌ನಲ್ಲೇ ಮುಳುಗಿರುವ ಇಂದಿನ ಪೀಳಿಗೆ ಮಧ್ಯೆ ಓದುಗರ ಚಾವಡಿ ಎಂಬ ಸಾಹಿತ್ಯಕೂಟವನ್ನು ಹುಟ್ಟುಹಾಕಿ ಅದ್ಭುತ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಸಾಹಿತಿ ಜಯಲಕ್ಷ್ಮಿ ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಓದುಗರ ಚಾವಡಿ ಆಶ್ರಯದಲ್ಲಿ ಹಾಗೂ ಜಿಲ್ಲಾ ಯುವ ಪರಿಷತ್ತಿನ ಸಹಯೋಗದೊಂದಿಗೆ ಗುರುವಾರ ಜರುಗಿದ ಐದು ಕೃತಿಗಳ ಲೋಕಾರ್ಪಣೆ ಹಾಗೂ ಉತ್ತಮ ಶಿಕ್ಷಕ-ಉಪನ್ಯಾಸಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಹೆಚ್ಚು ಪ್ರಚಾರವಿಲ್ಲದೆ ಎರಡು ವರ್ಷಗಳನ್ನು ಪೂರೈಸಿರುವ ಓದುಗರ ಚಾವಡಿ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿ. ಇಡೀ ನಾಡಿಗೆ ಪರಿಚಯವಾಗಿ ಕನ್ನಡ ಸಾರಸ್ವತಲೋಕದ ಅಪರೂಪದ ಕೊಡುಗೆಯಂತೆ ಎದ್ದು ನಿಲ್ಲಲಿ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ವನಿತಾ ತೊರವಿ ಮಾತನಾಡಿ, ಕೃತಿ ಪರಿಚಯಕ್ಕೆಂದೇ ಹುಟ್ಟಿಕೊಂಡ ವಿಶೇಷ ಬಳಗ ಈ ಓದುಗರ ಚಾವಡಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಾವಡಿ ಅಧ್ಯಕ್ಷ ಬಿ.ಆರ್.ಬನಸೋಡೆ ಮಾತಾಡಿ, ನಮ್ಮ ಚಾವಡಿಗೆ ಸೂರು ಬೇಕಿದೆ. ಮುಂದಿನ ದಿನಗಳಲ್ಲಿ ಆ ವ್ಯವಸ್ಥೆಯನ್ನು ಮಾಡಿಕೊಂಡು ಶಾಲಾ ಕಾಲೇಜುಗಳಲ್ಲಿ ಅರ್ಥಪೂರ್ಣ ಹಾಗೂ ವೈಚಾರಿಕವಾದ ವಿಷಯಗಳನ್ನು ಮುಟ್ಟಿಸುವಲ್ಲಿ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದರು.

ಎರಡೇ ವರ್ಷಗಳಲ್ಲಿ ಈಗಾಗಲೇ ಇಪ್ಪತ್ತು ಕೃತಿಗಳ ಪರಿಚಯ ಮುಗಿಸಿ, ಹನ್ನೆರಡು ಉಪನ್ಯಾಸ ಮಾಲಿಕೆಯ ಒಂದು ಕೃತಿಯನ್ನು ಸಿದ್ಧಗೊಳಿಸಿ ಇದೀಗ ಬಿಡುಗಡೆ ಮಾಡಿದ್ದೇವೆ. ಬರುವ ದಿನಮಾನದಲ್ಲಿ ಚಾವಡಿಗೆ ಮತ್ತಷ್ಟು ಹೊಸರೂಪ ನೀಡಲಾಗುವುದು ಎಂದು ನುಡಿದರು.

ಉಪನ್ಯಾಸಕ ಯು.ಎನ್. ಕುಂಟೋಜಿ ಮಾತನಾಡಿ, ಸಣ್ಣದಾಗಿ ಶುರುವಾದ ಚಾವಡಿ ಕ್ರಮೇಣ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಶೀಘ್ರವೇ ವಿಜಯಪುರ ಸಾಹಿತ್ಯ ಸಂಭ್ರಮದ ಹೆಸರಿನಲ್ಲಿ ಸಮ್ಮೇಳನವನ್ನು ಹಾಗೂ ಹಾಸ್ಯ ಮತ್ತು ಜ್ಞಾನದ ಹರಟೆ ಕಾರ್ಯಕ್ರಮವನ್ನು ಕೂಡ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದರು.

ಸಾಹಿತಿ ಶರಣಗೌಡ ಪಾಟೀಲ, ಡಾ.ಎಂ.ಎಸ್.ಮಾಗಣಗೇರಿ, ಮನು ಪತ್ತಾರ, ನೇತ್ರತಜ್ಞ ಡಾ.ಪ್ರಭುಗೌಡ ಪಾಟೀಲ, ವಿರಕ್ತಮಠದ ಅಭಿನವ ಸಿದ್ದಲಿಂಗ ದೇವರು ಮಾತನಾಡಿದರು.

ಇದೇ ವೇಳೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕ-ಶಿಕ್ಷಕಿಯರಿಗೆ, ಉಪನ್ಯಾಸಕ- ಉಪನ್ಯಾಸಕಿಯರಿಗೆ ಉತ್ತಮ ಶಿಕ್ಷಕ, ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಾಲಗಾಂವದ ಅಮೃತಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು, ರಾಜಕೀಯ ಧುರೀಣ ಎಸ್.ಎಂ ಪಾಟೀಲ ಗಣಿಹಾರ, ಉದ್ಯಮಿಗಳಾದ ಶಕೀಲ್ ಸುತಾರ, ಶರಣಬಸಪ್ಪ ಅರಕೇರಿ, ಯುವ ಪರಿಷತ್ತಿನ ಶರಣು ಸಬರದ, ಡಾ.ಜಿ.ಡಿ.ಕೊಟ್ನಾಳ, ಗಂಗಾಧರ ತೆಗ್ಗೆಳ್ಳಿ, ಎಸ್.ಎಂ.ಖೇಡಗಿ, ರಾಜಶೇಖರ ಮುತ್ತಿನಪೆಂಡಿಮಠ, ಚಂದ್ರಶೇಖರ ಬುರಾಣಪುರ, ಎಸ್.ಎಸ್.ಖಾದ್ರಿ ಇನಾಮದಾರ, ಸೋಮಶೇಖರ ಕುರ್ಲೆ, ರಾಜೇಂದ್ರಕುಮಾರ್ ಬಿರಾದಾರ್, ರಮ್ಯಾ ಬಿರಾದಾರ್, ಪ್ರೀತಿ ಪಾಟೀಲ, ರಾಜಶೇಖರ ಉಮರಾಣಿ, ಸುಭಾಸಚಂದ್ರ ಕನ್ನೂರ, ಎ.ಜಿ.ಬಿರಾದಾರ್, ಅಂಬರೀಶ್ ಪೂಜಾರಿ, ಬಸವರಾಜ ಕುಂಬಾರ ಹಾಗೂ ಸುನೀತಾ ಉಮರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net