

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತ್ಯ ಕ್ಷೇತ್ರಕ್ಕೆ ಯುವ ಪೀಳಿಗೆ ಹೆಚ್ಚು ಹೆಚ್ಚು ಬರಬೇಕು. ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ಕಾರ್ಯ ಸಹ ಆಗಬೇಕು. ಆದರೆ ಇಂದು ಒಂದು ಗುಂಪನ್ನು ಕಟ್ಟಿಕೊಂಡು ಬೇರೆ ಬೇರೆ ಕೆಲಸಕ್ಕೆ ಸೀಮಿತವಾಗಿ ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ ಎಂದು ನ್ಯಾಯವಾದಿ ಪ್ರಕಾಶ ಉಡಕೇರಿ ಅಭಿಪ್ರಾಯಪಟ್ಟರು.
ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕ ಸಾಹಿತಿ ನಾರಾಯಣ ಭಜಂತ್ರಿ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಬಿಟ್ಟು ಬರಹಗಾರರ ಸಂದೇಶಗಳು, ಚಿಂತನೆಗಳು ಸಮಾಜಕ್ಕೆ ತಲುಪಬೇಕು. ಅದಕ್ಕೆ ಪೂರಕವಾಗುವಂತೆ ನಾರಾಯಣ ಭಜಂತ್ರಿ ಅವರ ಈ ಕಾರ್ಯಕ್ರಮ ಇಂದಿನ ತುರ್ತು ಮತ್ತು ಅರ್ಥರ್ಪೂಣವಾಗಿದೆ. ಬರೆಯುವ ಮನಸ್ಸು ಮತ್ತು ಸಹಜತೆ ಇದ್ದರೆ ಸಾಕು ಅವನೊಬ್ಬ ಉತ್ತಮ ಬರಹಗಾರನಾಗಬಲ್ಲ ಎನ್ನುವುದಕ್ಕೆ ಭಜಂತ್ರಿ ಗುರುಗಳೇ ಸಾಕ್ಷಿ. ಯುವ ಬರಹಗಾರರಿಗೆ ಹಿರಿಯ ಸಾಹಿತಿಗಳ ಪ್ರೋತ್ಸಾಹ, ಮಾರ್ಗದರ್ಶನ ಅಗತ್ಯ ಎಂದರು.
ಶ್ರೀಧರ ಗಸ್ತಿ ಮಾತನಾಡಿ, ಸಂಟನೆ ಕೇವಲ ಹೋರಾಟವಾಗಬಾರದು. ಮುಂದಿನ ಪೀಳಿಗೆಗೆ ಅನುಕೂಲವಾಗುವ ವಾತಾವರಣ ಸೃಷ್ಟಿಸುವ ಕಾರ್ಯವನ್ನು ಸಂಘಟನೆಗಳು ಮಾಡಬೇಕಿದೆ ಎಂದರು.
ಡಾ. ಪ್ರಭಾಕರ ಲಗಮಣ್ಣವರ, ಮಲ್ಲಪ್ಪ ಹೊಂಗಲ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ನಾರಾಯಣ ಭಜಂತ್ರಿ, ರೇವಣಸಿದ್ದಪ್ಪ ಸಿಂದಗಿ, ಎಸ್.ಎಚ್. ಬಡಿಗೇರ, ಎಸ್.ಎಂ. ದಾನಪ್ಪಗೌಡರ, ಶಾಂತವೀರ ಬೇಟಗೇರಿ, ವೈ.ಸಿ ಮೇಲಿನಮನಿ, ನಾರಾಯಣ ಭಜಂತ್ರಿ ಕುಟುಂಬಸ್ಥರು, ಇತರರು ಇದ್ದರು.
ಮಹಾಂತೇಶ ನರೇಗಲ್ಲ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾನಂದ ಶಿಂಧೆ ನಿರೂಪಿಸಿದರು.