

ಕೋಲಾರ: ಸತ್ಯಶೋಧನೆಯ ಜವಾಬ್ದಾರಿ ಹೊತ್ತ ಪತ್ರಕರ್ತರು ಸುದ್ದಿ ಮಾಡುವಾಗ ಅದರಲ್ಲಿ ವಾಸ್ತವಾಂಶವಿರಬೇಕೇ ಹೊರತೂ ತಮ್ಮ ಅಭಿಪ್ರಾಯಗಳಿಗೆ ಅವಕಾಶ ಇರಬಾರದು. ವೃತ್ತಿಧರ್ಮಕ್ಕೆ ಕುತ್ತು ಬಾರದಂತೆ ಮತ್ತು ಸಮಾಜದ ಸ್ವಾಸ್ಥ$್ಯ ಹಾಳಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಗೆ ಚಾಲನೆ ಹಾಗೂ ವಾರ್ಷಿಕ ಪ್ರಶಸ್ತಿ ಪುರಸತ ಪತ್ರಕರ್ತರಿಗೆ ಸನ್ಮಾನ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಬರಹದಲ್ಲಿ ಸಮಾಜದ ಹಿತವಿರಬೇಕು. ಸುದ್ದಿ ಮಾಡುವಾಗ ಭಾಷೆ ಮೇಲೆ ಹಿಡಿತ ಇರಬೇಕು. ಪ್ರೌಢಿಮೆಯೂ ಅಗತ್ಯ, ಪ್ರತಿ ಪತ್ರಿಕೆಗೂ ತನ್ನದೇ ಆದ ವಿನ್ಯಾಸ, ಬರಹದ ಶೈಲಿ ಇರುತ್ತದೆ. ತಾವು 1992ರಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದನ್ನು ನೆನಪಿಸಿಕೊಂಡು ನನ್ನ ಜೀವನದ ಯೌವನವನ್ನು ಪತ್ರಕರ್ತನಾಗಿ ಬಳಸಿಕೊಂಡೆ, ನನಗೆ ಮಾತೃಬೇರು ಪತ್ರಿಕೋದ್ಯಮ ಎಂದರು.
ಬರಹ ಗೊತ್ತಿದ್ದರೆ ಮಾತ್ರ ಪತ್ರಕರ್ತರಾಗಲು ಸಾಧ್ಯವಿಲ್ಲ. ಆಧುನಿಕತೆಯ ಉತ್ಪನ್ನಗಳನ್ನು ಸಹಿಸಿಕೊಳ್ಳಬೇಕು. ಅದು ನಮ್ಮನ್ನು ದಾರಿತಪ್ಪಿಸುವ ಕೆಲಸವಾಗದಂತೆ ಎಚ್ಚರವಹಿಸಬೇಕು. ಪತ್ರಿಕೋದ್ಯಮವನ್ನು ಪ್ರೀತಿಯಿಂದ ಅಪ್ಪಿಕೊಂಡಾಗ ತಾನಾಗಿಯೇ ನಿಷ್ಠೂರತೆ, ಬದ್ಧತೆ ಬರುತ್ತದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಪಾಲಕರು ಮಕ್ಕಳೊಂದಿಗೆ ಕೆಲವು ಸಮಯ ಕಳೆಯಬೇಕು. ಅವರಲ್ಲಿ ತಾವಾಗಿಯೇ ಯೋಚಿಸುವ ಮನಸ್ಥಿತಿ ಬೆಳೆಸಿ, ಕೇವಲ 4 ರೂಪಾಯಿಗೆ ವಿಶ್ವದ ಜ್ಞಾನ ನೀಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿ ಎಂದರು.
ಇದೇ ಸಂದರ್ಭದಲ್ಲಿ ಹೆಲ್ಮೆಟ್ ಅಗತ್ಯತೆ ಕುರಿತು ಮಕ್ಕಳಿಗೆ ತಿಳಿಹೇಳಿ, ಸ್ವಯಂ ರಕ್ಷಣೆಗೆ ಜ್ಞಾನದ ಕೋಟೆ ಕಟ್ಟಿಕೊಳ್ಳಿ ಹಾಗೆಯೇ ನಿಮ್ಮ ತಂದೆತಾಯಿಯ ಮೇಲೆ ಪ್ರೀತಿ ಇದ್ದರೆ ಹೆಲ್ಮೆಟ್ ಧರಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವ ಉಳಿಸಿ ಎಂದು ಸಲಹೆ ನೀಡಿದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಾಸುದೇವಹೊಳ್ಳ ಮಾತನಾಡಿ, ಕೋಲಾರ ಜಿಲ್ಲಾ ಸಂಘ ಪ್ರಥಮಗಳಲ್ಲಿ ಪ್ರಥಮವಾಗಿದೆ. ಜಿಲ್ಲಾ ಸಂಘ ಕಟ್ಟಡ ರಾಜ್ಯಕ್ಕೆ ಮೊದಲು, ಅತ್ಯುತ್ತಮ ಭವನ ಪ್ರಶಸ್ತಿಯೂ ನಮಗೆ ಮೊದಲು ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಿಕಾರಂಗ ಇಂದು ಡೋಲಾಯಮಾನ ಪರಿಸ್ಥಿತಿಯಲ್ಲಿದ್ದು, ಸವಾಲುಗಳನ್ನು ಎದುರಿಸುತ್ತಿದೆ, ಸೋಷಿಯಲ್ ಮೀಡಿಯಾ ಪೈಪೋಟಿಯಿಂದ ಇಂದು ಸತ್ಯ, ಸುಳ್ಳು ಎರಡೂ ಹೇಳಬೇಕಾದ ಸ್ಥಿತಿ ಇದೆ ಎಂದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮುನಿರಾಜು ಮಾತನಾಡಿ, ಜಿಲ್ಲೆಯ ಪತ್ರಕರ್ತರಿಗೆ ಜಿಲ್ಲಾಧಿಕಾರಿಗಳು ನಿವೇಶನಗಳನ್ನು ನೀಡಲು 5 ಎಕೆರೆ ಜಮೀನನ್ನು ಸಂಘಕ್ಕೆ ಮಂಜೂರು ಮಾಡಿಕೊಡಬೇಕು. ಜಿಲ್ಲಾಧಿಕಾರಿಗಳು ಕೆಲವು ದಿನಗಳ ಹಿಂದೆ ತಿಳಿಸಿದ್ದಾರೆ. ನೀವೇ ಸ್ಥಳವನ್ನು ಹುಡುಕಿ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಪತ್ರಕರ್ತರ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ವಂಶೋಧಯ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್, ಸಿ.ಎಂ.ಮುನಿಯಪ್ಪ, ಮಹಮದ್ ಯೂನಸ್, ಅನಂತರಾಮು, ನೌಕರರ ಸಂಘದ ನಿಟಪೂರ್ವ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ರವಿಚಂದ್ರ, ರೈತಸಂಘದ ಕಲ್ವಮಂಜಲಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ಕುಮಾರ್ ಇದ್ದರು.
30ಕ್ಕೇರಿದ ಇಡಿಗಂಟು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಅದಕ್ಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬಯಸಿದಾಗ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ 25 ಲಕ್ಷ ರೂ. ಕೊಡಿಸಿದ್ದು, ಈಗ 30 ಲಕ್ಷ ರೂ. ಇಡುಗಂಟು ಆಗಿದೆ ಎಂದರು.