

ಗಂಗಾವತಿ: ದಾಖಲೆ ಪ್ರಮಾಣದ ಸದಸ್ಯತ್ವ ನೋಂದಣೆ ಕಾರ್ಯ ಪ್ರತಿ ಕಾರ್ಯಕರ್ತರ ಸಂಕಲ್ಪವಾಗಬೇಕಿದ್ದು, ಪಕ್ಷ ಬಲಪಡಿಸುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ 3ನೇ ವಾರ್ಡ್‌ನಲ್ಲಿ ಬಿಜೆಪಿ ಗ್ರಾಮೀಣ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಮೊದಲನೇ ಹಂತದ ಅಭಿಯಾನದಲ್ಲಿ ದೇಶದಾದ್ಯಂತ ದಾಖಲೆ ಪ್ರಮಾಣದಲ್ಲಿ ನೋಂದಣಿಯಾಗಿದ್ದು, ಏಳು ಕೋಟಿಗೂ ಅಧಿಕ ಜನರು ಸದಸ್ಯತ್ವ ಸ್ವೀಕರಿಸಿದ್ದಾರೆ.
ದೇಶದಾದ್ಯಂತ ನಡೆಯುತ್ತಿರುವ 2ನೇ ಹಂತದ ಐತಿಹಾಸಿಕ ಸದಸ್ಯತಾ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಬೆಂಬಲ ನೀಡಲು ಸದಸ್ಯತ್ವ ಪ್ರಮಾಣ ಹೆಚ್ಚಾಗಬೇಕಿದೆ. ನಿರೀಕ್ಷಿತ ಗುರಿ ತಲುಪುವಲ್ಲಿ ಕಾರ್ಯಕರ್ತರು ಸಮರ್ಪಣಾ ಭಾವದಿಂದ ಶ್ರಮಿಸುವಂತೆ ಸಲಹೆ ನೀಡಿದರು.
ವಾರ್ಡ್‌ನ ಮನೆಮನೆಗಳಿಗೂ ತೆರಳಿದ ಕಾರ್ಯಕರ್ತರು ಅಭಿಯಾನದ ಭಿತ್ತಿ ಚಿತ್ರವನ್ನು ಅಂಟಿಸಿ, ವಾರ್ಡ್‌ನ ಕುಟುಂಬ ಸದಸ್ಯರ ಸದಸ್ಯತ್ವ ಮೊಬೈಲ್ ಮೂಲಕ ನವೀಕರಿಸಲಾಯಿತು.
ಮುಖಂಡರಾದ ಹತ್ತಿಮರದ ಶಿವಪ್ಪ, ಮೆಹೂಸ್ ಆಲಿಖಾನ್, ಮನೋಹರ ಗೌಡ ಹೇರೂರು, ಯಮನೂರ್ ಚೌಡ್ಕಿ, ನಾಗರಾಜ್ ಚಳಗೇರಿ, ಚಂದ್ರು ಹೇರೂರು, ಕಲ್ಲಪ್ಪ ಗಡ್ಡಿ, ರಾಜಪ್ಪ ನಾಯಕ್, ಯಮನಪ್ಪ ಗಡ್ಡಿ, ನಿತೀಶ್ ಆನಂದ್ಕರ್, ಚಿನ್ನಪ್ಪ ನಾಯಕ್, ಯರಿಸ್ವಾಮಿ ಗೌಡ ಇತರರಿದ್ದರು.