

ಗುಳೇದಗುಡ್ಡ : ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮ್ಮ ಆರೋಗ್ಯ ನೀವೇ ಹಾಳು ಮಾಡಿಕೊಂಡಂತಾಗುತ್ತದೆ ಎಂದು ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ ಹೇಳಿದರು.
ಸಮೀಪದ ಹಂಗರಗಿ ಗ್ರಾಪಂ ವ್ಯಾಪ್ತಿಯ ಹಿರೇಬೂದಿಹಾಳ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿರುವ ನರೇಗಾ ಕಾರ್ಮಿಕರಿಗೆ ಶುಕ್ರವಾರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವುದರಿಂದ ಕಾಯಿಲೆಗಳನ್ನು ಪ್ರಾರಂಭದ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆ ಪಡೆಯಬಹುದಾಗಿದೆ. ಎಲ್ಲ ಕೂಲಿಕಾರ್ಮಿಕರೂ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಅಮೃತ ಅಭಿಯಾನದಡಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಟಗೇರಿ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಅಂದಾಜು 204 ನರೇಗಾ ಕೂಲಿ ಕಾರ್ಮಿಕರ ರಕ್ತದೊತ್ತಡ, ಮಧುಮೇಹ, ರಕ್ತಹೀನತೆ ಸೇರಿ ವಿವಿಧ ಕಾಯಿಲೆಗಳ ಪರೀಕ್ಷೆ ನಡೆಸಲಾಯಿತು.
ಗ್ರಾಪಂ ಕಾರ್ಯದರ್ಶಿ ಎಸ್.ಎಸ್. ಬಂದಕೇರಿ, ಆರೋಗ್ಯ ಅಧಿಕಾರಿಗಳಾದ ಕವಿತಾ ಲಮಾಣಿ, ಸಂಜಯ ರಾಠೋಡ, ಶಶಿಕಲಾ ಕೆಲೂರ, ಸುಮಾ ಕೊಣ್ಣೂರ, ಶಿಲ್ಪಾ ಹಡಪದ, ಜೆ.ಕೆ. ನಾಯಕ, ರಾಮಣ್ಣ ಬಂದಕೇರಿ, ಮುತ್ತಪ್ಪ ನಾಗೂರ ಇತರರಿದ್ದರು.