ಕನ್ನಡೇತರರಿಗೂ ಭಾಷೆ ಕಲಿಸುವ ಕೆಲಸವಾಗಲಿ

ಚನ್ನರಾಯಪಟ್ಟಣದ ಟೈಮ್ಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಿ.ಕೆ.ಗಂಗಾಧರ್ ಉದ್ಘಾಟಿಸಿದರು.  ಶಿವರಾಂ, ಶ್ರೀಕಂಠ ಇದ್ದರು.
ಚನ್ನರಾಯಪಟ್ಟಣದ ಟೈಮ್ಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಿ.ಕೆ.ಗಂಗಾಧರ್ ಉದ್ಘಾಟಿಸಿದರು. ಶಿವರಾಂ, ಶ್ರೀಕಂಠ ಇದ್ದರು.
Published on

ಚನ್ನರಾಯಪಟ್ಟಣ; ಕನ್ನಡಿಗರು ಕನ್ನಡವನ್ನು ನಿತ್ಯ ಬಳಸುವುದರ ಜತೆಗೆ ಕನ್ನಡೇತರರಿಗೆ ಸಣ್ಣ ಮಟ್ಟದಲ್ಲಾದರೂ ಕನ್ನಡವನ್ನು ಕಲಿಸುವ ಅಗತ್ಯತೆ ಇದೆ ಎಂದು ಟೈಮ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ತಿಳಿಸಿದರು.

ಪಟ್ಟಣದ ಟೈಮ್ಸ್ ವಿದ್ಯಾಸಂಸ್ಥೆ ಆವರಣದಲ್ಲಿ ಶುಕ್ರವಾರ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಾಂಪ್ರದಾಯಿಕ ದಿನ, ಹಾಗೂ ಟೈಮ್ ಸವಿರುಚಿ ಮತ್ತು ವಿಜ್ಞಾನ ವಿಭಾಗದ ವಿವಿಧ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಯಲ್ಲ, ಅದು ಕರ್ನಾಟಕದ ಅಸ್ಮಿತೆ. ಹೀಗಿರುವಾಗ ರಾಜ್ಯ ಉಳಿಯಬೇಕಾದರೆ ಮೊದಲು ಭಾಷೆ ಉಳಿಯಬೇಕು ಎನ್ನುವುದನ್ನು ಅರಿಯಬೇಕು ಎಂದರು.

ಕನ್ನಡಕ್ಕೆ ಮೂರು ಸಾವಿರ ವರ್ಷದಷ್ಟು ಇತಿಹಾಸವಿದೆ. ಇಂದು ಜಾಗತೀಕರಣದ ವ್ಯೆಹದಲ್ಲಿರುವ ನಾವು ಇಂಗ್ಲಿಷ್ ಭಾಷೆಯನ್ನು ನೆಚ್ಚಿಕೊಂಡಿರುವುದು ಉದ್ಯೋಗಕ್ಕೆ ಮಾತ್ರ. ಅದು ಭ್ರಮೆಯಂತೆ ನಮ್ಮನ್ನು ಆವರಿಸಿಕೊಂಡಿರುವುದು ನಿಜಕ್ಕೂ ದುರಂತ. ಇಂದಿನ ಮಕ್ಕಳ ಕಲಿಕೆಯಲ್ಲಿ ಕನ್ನಡ ಕಸ್ತೂರಿಯ ಸುವಾಸನೆ ಕಡಿಮೆಯಾಗುತ್ತಿದೆ. ಭಾಷೆಯೇ ಸೊರಗುತ್ತಿರುವಾಗ ಅದರಿಂದ ಸೃಷ್ಟಿಯಾಗುವ ನಾನಾ ರೀತಿಯ ಸಾಹಿತ್ಯ ಪ್ರಕಾರ ಮತ್ತು ಸಾಹಿತ್ಯ ಸಂಸ್ಥೆಗಳು ಜನರಿಂದ ದೂರವಾಗುತ್ತಿವೆ. ಈ ಹಂತದಲ್ಲಿ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಬಳಸಿ ಉಳಿಸಬೇಕಾಗಿದೆ ಎಂದರು.

ಕನ್ನಡಿಗರು ಪರಭಾಷಿಗರನ್ನು ಕನ್ನಡದಲ್ಲೇ ಮಾತನಾಡಿಸಬೇಕು. ಏಕೆಂದರೆ ಒಬ್ಬ ವ್ಯಕ್ತಿ ಪರಿಪೂರ್ಣತೆ ಪಡೆಯಬೇಕಾದರೆ ಮಾತೃ ಭಾಷೆಯಿಂದ ಮಾತ್ರ ಸಾಧ್ಯ. ಮಾತೃಭಾಷೆಯನ್ನು ಕಡೆಗಣಿಸಿದ ವ್ಯಕ್ತಿ ಹೆತ್ತ ತಾಯಿಯನ್ನು ಕಡೆಗಣಿಸಿದಷ್ಟೇ ಸತ್ಯ. ಪರಭಾಷೆ ನಮಗೆ ಎಷ್ಟು ಅವಶ್ಯವೋ ಅಷ್ಟನ್ನು ಮಾತ್ರ ಬಳಸಬೇಕು ಎಂದು ತಿಳಿಸಿದರು.

ನಾಗಶ್ರೀ ವಿದ್ಯಾಸಂಸ್ಥೆ ಪ್ರಾಂಶುಪಾಲ ಶಿವರಾಂ ಮಾತನಾಡಿ, ಸಾಂಪ್ರದಾಯಿಕ ಎಂಬುದು ಆಚರಣೆಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಯುವ ಜನತೆ ಭಾರತೀಯ ಸಂಪ್ರದಾಯದ ಮೂಲ ತತ್ವಾದರ್ಶಗಳನ್ನು ಅರ್ಥಮಾಡಿಕೊಳ್ಳಬೇಕು. ಮಾನವೀಯ ಮೌಲ್ಯಗಳಿಗೆ ಬೆಲೆಕೊಟ್ಟು ಜೀವನ ನಡೆಸಿದರೆ ಈ ಆಚರಣೆಗೆ ಅರ್ಥ ಬರುತ್ತದೆ.ಇಂದಿನ ಆಧುನಿಕ ಯುಗದಲ್ಲಿ ಇಂತಹ ಆಚರಣೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಸಾಂಪ್ರದಾಯಿಕ ದಿನದ ಅಂಗವಾಗಿ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಬಟ್ಟೆ ಧರಿಸಿ ಸಂಭ್ರಮಿಸಿದರು. ಬಹಳಷ್ಟು ವಿದ್ಯಾರ್ಥಿನಿಯರು ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯರಾಗಿ ಬಂದರೆ, ಕೆಲವರು ಪಂಚೆ, ಮೊದಲಾದ ಸಾಂಪ್ರದಾಯಿಕ ಬಟ್ಟೆ ಧರಿಸಿದ್ದರು. ಪ್ರಾಚಾರ್ಯರೂ ಸೇರಿದಂತೆ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು.

ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ನನಾ ಬಗೆ ಖಾದ್ಯ ತಯಾರಿಸಿ ಮಾರಾಟ ಮಾಡಿ ಸಂತಸ ಪಟ್ಟರು. ವಿದ್ಯಾರ್ಥಿಗಳು ಪಾಲಕರ ನೆರವಿನಿಂದ ವಿವಿಧ ಬಗೆಯ ಸಸ್ಯಾಹಾರ ಮತ್ತು ಮಾಂಸಾಹಾರ ಭಕ್ಷ್ಯ ಭೋಜನವನ್ನು ಮಾಡಿಸಿಕೊಂಡು ಬಂದಿದ್ದರು. ನಾಟಿ ಕೋಳಿ ಸಾರು, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಕಬಾಬ್, ಮಟನ್ ಸಾರು ಜತೆಗೆ ರಾಗಿಮುದ್ದೆ, ಪರೋಟ, ಫಿಶ್ ಫ್ರೈ, ಫಿಶ್ ತವಾ ಫ್ರೈ ಚಪಾತಿ, ಸಸ್ಯಹಾರ ವಿಭಾಗದಲ್ಲಿ ಸಮೋಸಾ, ಬಜ್ಜಿ, ಚುರುಮುರಿ, ಅವಲಕ್ಕಿ ಒಗ್ಗರಣೆ, ಗೆಜ್ಜು ಹುಣಸೆಹಣ್ಣು, ಲಾಲಿಪಾಪ್, ಫ್ರೂಟ್ ಸಲಾಡ್, ಐಸ್‌ಕ್ರೀಂ, ಕ್ಯಾರೆಟ್ ಹಲ್ವಾ, ಚಕ್ಕುಲಿ, ರವೆ ತಯಾರಿಸಿದರು.

ಕಾರ್ಯಕ್ರಮದಲ್ಲಿ ಎಚ್.ಡಿ.ಕೋಟೆಯ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ಹನುಮಂತ ರಾವ್‌ಮಾತನಾಡಿದರು. ಟೈಮ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶ್ರೀಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net