

ಇಳಕಲ್ಲ(ಗ್ರಾ): ಅಸಹಾಯಕರು, ದೀನ ದಲಿತರಿಗೆ ಕಾನೂನು ನೆರವು ಒದಗಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ನ್ಯಾಯಮೂರ್ತಿ ಚಂದ್ರಶೇಖರ ದಿಡ್ಡಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡ ಕಾನೂನು ಅರಿವು ನೆರವು ಮತ್ತು ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದೆ. ಅದರ ಫಲ ಜನರಿಗೆ ಸಿಗುವಂತಾಗಬೇಕು ಎಂದರು.
ಲೋಕಾಯುಕ್ತರು ಸಾರ್ವಜನಿಕರ ಕುಂದುಕೊರತೆ ಕೇಳಲು ಆರಂಭಿಸಿದಾಗ ಜನರು ತಮ್ಮ ಸಮಸ್ಯೆ ತೋಡಿಕೊಳ್ಳಲು ಆರಂಭಿಸಿದರು.
ಹಲವಾರು ಇಲಾಖೆಗಳ ಅಧಿಕಾರಿಗಳು ಆಗಮಿಸಿ ತಮ್ಮ ತಮ್ಮ ಇಲಾಖೆಯಲ್ಲಾದ ಸಾಧನೆಗಳ ಕುರಿತು ವಿವರಣೆ ನೀಡಿದರು.
ಬಾಗಲಕೋಟದ ಸಿದ್ಧೇಶ್ವರ ರೆಡ್ಡಿ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಭೀಮನಗೌಡ ಬಿರಾದಾರ, ಬಸವರಾಜ ಲಮಾಣಿ, ಬಸವರಾಜ ಮೂಕರ್ತಿಹಾಳ, ಪೌರಾಯುಕ್ತ ಶ್ರೀನಿವಾಸ ಜಾಧವ ಇದ್ದರು.
ತಹಸೀಲ್ದಾರ್ ಸತೀಶ್ ಕೂಡಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಗಡ್ಡಿ ಸ್ವಾಗತಿಸಿದರು. ಮುರಳೀಧರ ದೇಶಪಾಂಡೆ ವಂದಿಸಿದರು.