

ಉಳ್ಳಾಗಡ್ಡಿ-ಖಾನಾಪುರ: ಅಹಂಕಾರ ತ್ಯಜಿಸಿದಾಗ ಮಾತ್ರ ಸಕಲವೂ ಸಿದ್ಧಿಸುತ್ತದೆ. ಲಿಂಗಾಯತ ಧರ್ಮದ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಹುಣಸಿಕೊಳ್ಳಮಠದ ಸಿದ್ಧಬಸವ ದೇವರು ಹೇಳಿದರು.
ಸಮೀಪದ ಯಮಕನಮರಡಿ ಹುಣಸಿಕೊಳ್ಳಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ವಚನಾಮೃತ ಬೋಧೆ ಪ್ರವಚನದ ಸಮಾರೋಪದಲ್ಲಿ ಅವರು ಮಾತನಾಡಿದರು. ಸ್ವಾಮೀಜಿಗಳು ಜ್ಞಾನ, ವೈರಾಗ್ಯಭಾವ ಹೊಂದಿದ್ದು, ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಲಿಂಗಾಯತ ಸಮುದಾಯದ ಎಲ್ಲರೂ ಲಿಂಗದೀಕ್ಷೆ ಪಡೆದುಕೊಳ್ಳಬೇಕು. ಲಿಂಗಾಯತ ಧರ್ಮದ ತಿರುಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ತತ್ತ್ವ-ಸಿದ್ಧಾಂತಗಳನ್ನು ರೂಢಿಸಿಕೊಳ್ಳಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಹಾಸನದ ಸಂಗನಬಸವೇಶ್ವರ ತೋಂಟದಾರ್ಯ ಮಠದ ಶ್ರೀ ಸಿದ್ಧಬಸವ ದೇವರು ಮತ್ತು ಬೈಲವಾಡದ ಶಂಕರ ದೇವರು ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ವಚನಕಟ್ಟುಗಳ ಮೆರವಣಿಗೆ ನಡೆಯಿತು.
ದಾಕ್ಷಾಯಣಿ ಗುರವ, ಸುವರ್ಣಾ ಗುಡಸ ವಚನ ಗಾಯನ ಪ್ರಸ್ತುತ ಪಡಿಸಿದರು. ಗಿರೀಶ ಮಿಶ್ರಕೋಟಿ ಮಾತನಾಡಿದರು. ಶಿವಶಂಕರ ಝುಟ್ಟಿ, ಮಹಾಲಿಂಗ ಕುಂಬಾರ, ಈರಣ್ಣ ಪಾವಟೆ, ದುಂಡಯ್ಯ ಹಿರೇಮಠ, ರಾಜು ಮಿಶ್ರಕೋಟಿ, ಕಿರಣಸಿಂಗ ರಜಪೂತ, ಹೇಮಯ್ಯ ಮಠಪತಿ, ಎಸ್.ಆರ್.ತಬರಿ ಇತರರಿದ್ದರು.