ಜನಪರ ಸುದ್ದಿ ನೀಡುವ ಕಾರ್ಯ ಪತ್ರಕರ್ತರಿಂದಾಗಲಿ

telangara
Published on

ಯಲ್ಲಾಪುರ: ಸಂಕೀರ್ಣ ವಿಚಾರಗಳನ್ನು ಸರಳವಾಗಿ, ಜನರಿಗೆ ಅರ್ಥವಾಗುವ ಹಾಗೆ ತಲುಪಿಸುವಲ್ಲಿ ಯಶಸ್ವಿಯಾದರೆ ಮಾಧ್ಯಮಗಳು ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ವಿಶ್ವದರ್ಶನ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಪ್ರಾಂಶುಪಾಲ, ‘ವಿಜಯವಾಣಿ’ ಡೆಪ್ಯುಟಿ ಎಡಿಟರ್ ನಾಗರಾಜ ಇಳೆಗುಂಡಿ ಹೇಳಿದರು.

ತಾಲೂಕಿನ ತೇಲಂಗಾರಿನಲ್ಲಿ ಮೈತ್ರಿ ಕಲಾ ಬಳಗದ ಬೆಳ್ಳಿ ಹಬ್ಬದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ‘ಕನ್ನಡ ಸುದ್ದಿ ಮಾಧ್ಯಮಗಳು ಮತ್ತು ಸವಾಲುಗಳು’ ಕುರಿತ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸವಾಲುಗಳ ನಡುವೆ ಜನಪರ ಸುದ್ದಿ, ವರದಿಗಳನ್ನು ಕೊಡುವ ಕಾರ್ಯ ಪತ್ರಕರ್ತರಿಂದ ಆಗಬೇಕು. ಈ ಮೊದಲು ಮಾಧ್ಯಮಗಳ ಮೇಲೆ ಜನರಲ್ಲಿದ್ದ ವಿಶ್ವಾಸಾರ್ಹತೆಯನ್ನು ಪುನಃ ಮೂಡಿಸುವ ಪ್ರಯತ್ನ ನಡೆಯಬೇಕು. ಶಿಕ್ಷಣದ ಮಾಧ್ಯಮ ಯಾವುದೇ ಇದ್ದರೂ, ಹೊಸ ಓದುಗರನ್ನು ಕನ್ನಡ ಸಂಸ್ಕೃತಿಗೆ ಒಗ್ಗಿಸಬೇಕು ಎಂದರು.

ಸಾಂಪ್ರದಾಯಿಕ ಓದುಗರನ್ನು ಉಳಿಸಿಕೊಂಡು, ಹೊಸ ಓದಗರನ್ನು ತಲುಪುವ ಡಿಜಿಟಲ್ ವ್ಯವಸ್ಥೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ. ವಿದೇಶಿ ಬಂಡವಾಳ ಹೂಡಿಕೆಗೆ ಮಾಧ್ಯಮದಲ್ಲಿ ಅವಕಾಶವಿದ್ದು, ಅದರಿಂದ ನಮ್ಮ ದೇಶದ ಸಂಸ್ಕೃತಿಯ ಮೇಲೆ ಉಂಟಾಗಬಹುದಾದ ಪರಿಣಾಮದ ಬಗೆಗೆ ಚಿಂತನೆಯ ಅಗತ್ಯವಿದೆ ಎಂದ ಅವರು, ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮೂಲಕ ವೃತ್ತಿಪರ ಪತ್ರಕರ್ತರನ್ನು ತಯಾರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಹಿರಿಯ ಪತ್ರಕರ್ತ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಜನರಿಗೆ ಬೇಕಾದದ್ದನ್ನು ಕೊಡುವುದಕ್ಕಿಂತ ಜನರಿಗೆ ಅವಶ್ಯಕತೆ ಇರುವುದನ್ನು ನೀಡುವುದು ಮಾಧ್ಯಮದವರ ಕರ್ತವ್ಯ ಆಗಬೇಕು ಎಂದರು.

ಗೋಷ್ಠಿಯಲ್ಲಿ ಪತ್ರಕರ್ತರಾದ ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರೆಮನೆ, ಜಿ.ಎನ್. ಭಟ್ಟ ತಟ್ಟಿಗದ್ದೆ, ವಿ.ಜಿ. ಗಾಂವ್ಕರ, ಶ್ರೀಧರ ಅಣಲಗಾರ, ಕೇಬಲ್ ನಾಗೇಶ ಮಾತನಾಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಇತರರಿದ್ದರು. ಪ್ರದೀಪ ಗಾಂವ್ಕರ ಗೋಡೆಪಾಲ, ಸುಮಾ ಕಂಚೀಪಾಲ, ಗೋಪಾಲ ಭಟ್ಟ ತೋಟ್ಮನೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net