

ಕಲಾದಗಿ: ಬೀಳಗಿ ಮತಕ್ಷೇತ್ರದ ಜನರಿಗೆ ಯಾವುದೇ ರೀತಿಯಲ್ಲಿ ನೀರಿನ ಅಭಾವ ಆಗಬಾರದೆಂದು ಹಿಂದಿನ ನನ್ನ ಅವಧಿಯಲ್ಲೇ ಈ ಭಾಗದ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಕೆರೆಗಳನ್ನು ಏತನೀರಾವರಿ ಯೋಜನೆಗಳ ಮೂಲಕ ತುಂಬಿಸುವ ಕೆಲಸ ಅನುಷ್ಠಾನಗೊಳಿಸಲಾಗಿದೆ. ನೀರು ಸದ್ಬಳಕೆ ಆಗಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಸಮೀಪದ ತುಳಸಿಗೇರಿಯ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಶನಿವಾರ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾರಿ ಮಳೆಯ ಅಭಾವದಿಂದ ಅಂತರ್ಜಲಮಟ್ಟ ಬಹಳ ಕುಸಿದು ಬೋರ್‌ವೆಲ್‌ಗಳು ಬತ್ತಿಹೋಗಿವೆ. ಆದ್ದರಿಂದ ನೀರು ವ್ಯರ್ಥವಾಗದಂತೆ ಕೆರೆಗಳಿಗೆ ಹರಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಧಿಕಾರಿಗಳು ಕೆರೆಗಳು ಸಂಪೂರ್ಣವಾಗಿ ತುಂಬುವ ತನಕ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಎನ್‌ಆರ್‌ಐಜಿ ಯೋಜನೆ ಮೂಲಕ ಕೆರೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳದಲ್ಲಿದ್ದ ಪಿಡಿಒ ನವೀನ ಅರಳಿಮಟ್ಟಿ ಅವರಿಗೆ ಸೂಚಿಸಿದರು. ಮಾರುತೇಶ್ವರ ದೇವಸ್ಥಾನದ ಬಳಿಯ ಶುದ್ಧನೀರಿನ ಘಟಕವನ್ನು ಒಂದೆರಡು ದಿನದಲ್ಲಿ ಸರಿಮಾಡಲು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರು ಕಾಲು ತೊಳೆಯಲು ದೇವಸ್ಥಾನದ ಹೊರಭಾಗದಲ್ಲಿ ನಲ್ಲಿಗಳ ವ್ಯವಸ್ಥೆಗಳನ್ನು ಕೂಡಲೇ ಮಾಡಲು ತಹಸೀಲ್ದಾರ್ ಅಮರೇಶ ಪಮ್ಮಾರ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಪೂಜಾರ, ಮುಖಂಡರಾದ ಓಬಳೆಪ್ಪ ದೊಡಮನಿ, ಮಂಜುಗೌಡ ಪಾಟೀಲ, ಸಂಗಣ್ಣ ಮುಧೋಳ,ಪಾಂಡಪ್ಪ ಪೊಲೀಸ್, ಎಸ್.ಎಸ್.ಪಾಟೀಲ, ಶ್ರೀಕಾಂತ ಜೈನಾಪುರ, ನಾಗಪ್ಪ ಸೊನ್ನದ, ವೆಂಕಣ್ಣ ಭಂಗಿ, ವೆಂಕಟೇಶ ಹೊಸಕೋಟಿ, ಪಿಡಿಒ ನವೀನ ಅರಳಿಮಟ್ಟಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಕಾಶ ನಾಯಕ ಇತರರಿದ್ದರು.