

ವಿಜಯವಾಣಿ ಸುದ್ದಿಜಾಲ ಧಾರವಾಡ
ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘ 50 ವರ್ಷಗಳ ಕಾಲ ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ನಾವೆಲ್ಲ ಸೇರಿ ಸಮಾಜವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕೆಲಸ ಮಾಡಬೇಕು ಎಂದು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ದೈವಜ್ಞ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಯುವ ಪೀಳಿಗೆ ಸರಿಯಾದ ದಾರಿಯಲ್ಲಿ ಸಾಗಬೇಕಿದೆ. ಹೀಗಾಗಿ ಯುವಕರು ಮೋಬೈಲ್, ದುಶ್ಚಟಗಳಿಂದ ದೂರಿವಿದ್ದು, ಸುಸಂಸ್ಕೃರಾಗಬೇಕು. ಪಾಲಕರು ಮಕ್ಕಳನ್ನು ಆಧ್ಯಾತ್ಮದಂತಹ ಕಾರ್ಯಕ್ರಮಗಳಿಗೆ ಕರೆ ತರುವ ಮೂಲಕ ಅವರಲ್ಲಿ ಭಕ್ತಿ, ಶ್ರದ್ಧೆ ಬೆಳೆಯುವಂತೆ ಮಾಡಬೇಕು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಒಂದು ಸಂಘ ಸ್ಥಾಪಿಸಿ ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸುವುದು ಸವಾಲಿನ ಕೆಲಸ. ಆದರೆ ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘವನ್ನು ಸಮಾಜದ ಜನರ ಜನತೆಗೆ ಉಳಿದ ಸಮಾಜದ ಜನರಿಗೂ ಅನುಕೂಲವಾಗುವ ರೀತಿ ನಡೆಸಿರುವುದು ಶ್ಲಾಘನೀಯ. ಈ ಸಮಾಜ ಕೈವೊಡ್ಡಿ ಬೇಡಿದ ಸಮಾಜವಲ್ಲ. ಕೈ ಎತ್ತಿ ಕೊಟ್ಟಿರುವ ಸಮಾಜ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆ ನಡೆಸಲಿ ಎಂದು ಹಾರೈಸಿದರು.
ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಸಮಾಜದ ಎಲ್ಲ ಜನರೂ ಒಟ್ಟಾಗಿ ಸಮಾಜ ಬೆಳೆಸುವ ಕೆಲಸ ಮಾಡಬೇಕು. ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮಾಜದ ಜನರು ಕಾರ್ಯ ನಿರ್ವಹಿಸುವಂತಾಗಬೇಕು. ಅಂದಾಗ ಮಾತ್ರ ಸಾಮಾಜಿಕವಾಗಿ ಹೆಚ್ಚಿನದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಘದ ಅಧ್ಯಕ್ಷ ರವಿ ಗಾಂವಕರ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಜ್ಞಾನೇಶ್ವರಿ ದೈವಜ್ಞ ಬ್ರಾಹ್ಮಣ ಮಠದ ಟ್ರಸ್ಟಿಗಳು, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ದೈವಜ್ಞ ಬ್ರಾಹ್ಮಣ ಸಮಾಜದ ಸಂಘ -ಸಂಸ್ಥೆಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಯ್ಕರ, ವಸಂತ ಅಣವೇಕರ, ರಾಮಚಂದ್ರ ಶೇಟ, ಸಾಯಿರಾಮ ವೆರ್ಣೇಕರ, ನಿರ್ದೇಶಕರಾದ ಗಜಾನನ ರಾಯ್ಕರ, ಶ್ರೀಧರ ಶೇಟ್, ಸಂತೋಷ ರಾಯ್ಕರ, ವಲ್ಲಭ ಪಾವುಸ್ಕರ, ಅಜಿತ ಗಾಂವಕರ, ಶ್ರೀಕಾಂತ ರಾಯ್ಕರ, ಗಿರೀಶ ಡೊಮ್ನೆಕರ, ಸೀತಾರಾಮ ರೇವಣಕರ, ಪ್ರಶಾಂತ ವೆರ್ಣೇಕರ, ಮಹಿಳಾ ಮಂಡಳ ಪದಾಧಿಕಾರಿಗಳು, ಸಮಾಜ ಬಾಂಧವರು, ಇತರರು ಇದ್ದರು.