ಕಾವ್ಯಗಳಲ್ಲಿ ಚಿಂತನೆ ಸೇರಿಸುವ ಕೆಲಸವಾಗಲಿ

sdp Makkala kavighosti
Published on

ಸಿದ್ದಾಪುರ: ನಮ್ಮ ಭಾವನೆಗಳು ಮತ್ತು ಯೋಚನೆಗಳು ಒಟ್ಟಿಗೆ ಸೇರಿದಾಗ ಉತ್ಕೃಷ್ಟವಾದ ಕಾವ್ಯ ರಚನೆಯಾಗುತ್ತದೆ. ಇದರಿಂದ ಕಾವ್ಯಗಳು ಹೆಚ್ಚಿನ ಜನರಿಗೆ ಅರ್ಥವಾಗುತ್ತವೆ. ನೀವು ಕೇಳಿದ ಹಾಗೂ ಕಂಡಂತಹ ಪ್ರೀತಿ ಭಾವನೆಗಳನ್ನು ನೀವು ಕಾವ್ಯದಲ್ಲಿ ರಚಿಸಬಹುದು. ಹೆಚ್ಚೆಚ್ಚು ಓದುವುದರಿಂದ ಬರೆಯುವ ಕ್ರಮಗಳು ತಿಳಿಯುತ್ತವೆ ಎಂದು ಬಿಇಒ ಎಂ.ಎಚ್ .ನಾಯ್ಕ ಹೇಳಿದರು.

ತಾಲೂಕಿನ ಕೋಲಸಿರ್ಸಿಯಲ್ಲಿ ಆಧಾರ ಶಿಕ್ಷಣ, ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪತ್ರಕರ್ತ ದಿ. ಶಿವಶಂಕರ ಕೋಲಸಿರ್ಸಿ ಅವರ ನೆನಪಿನ ಕಲರವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ್ದ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾವ್ಯಗಳಲ್ಲಿ ಭಾವನೆಗಳನ್ನು ತೀವ್ರವಾಗಿ ವ್ಯಕ್ತಪಡಿಸಬೇಕು ಮತ್ತು ಚಿಂತನೆಗಳನ್ನು ಸೇರಿಸುವ ಕೆಲಸ ಆಗಬೇಕು ಎಂದರು.

ಕವಯತ್ರಿ ಶೋಭಾ ಹಿರೇಕೈ ಮಾತನಾಡಿ ಕಾವ್ಯ ರಚನೆಯ ಮೊದಲು ಓದುಗರಾಗಬೇಕು. ಆಸಕ್ತಿಯಿಂದ ಓದಿ ಬರುವಂತಹ ವಾಕ್ಯ ಪದಗಳನ್ನು ಗಮನಿಸಬೇಕು. ಓದುವ ಮೂಲಕ ಕಾವ್ಯ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಓದು ಮುಖೇನ ಪ್ರಾಸ ಪದಗಳನ್ನು ಗುರುತಿಸಬೇಕು. ಅಂದಾಗ ಮಾತ್ರ ಉತ್ತಮ ಕವನಗಳನ್ನು ರಚಿಸಬಹುದು ಎಂದರು.

ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ನಾಯ್ಕ ಕುಬ್ರಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಆಧಾರ್ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಎಸ್​ಡಿಎಂಸಿ ಅಧ್ಯಕ್ಷ ಕೆರಿಯಾ ನಾಯ್ಕ, ಇತರರು ಉಪಸ್ಥಿತರಿದ್ದರು.

15 ಮಕ್ಕಳು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿದರು. ಪರಿಷತ್ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ, ಕೋಶಾಧ್ಯಕ್ಷ ಪಿ. ಬಿ. ಹೊಸೂರ ಹಾಗೂ ಸುರೇಶ ಕಡಕೇರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net