ವೀರಶೈವ ಸಮಾಜ ಕಟ್ಟುವ ಕೆಲಸವಾಗಲಿ

snd swami
ಸಿಂಧನೂರಿನ ಕೋಟೆ ಈರಣ್ಣ ದೇವಸ್ಥಾನದಲ್ಲಿ ಸೋಮವಾರ ತಾಲೂಕು ವೀರಶೈವ ಸಮಾಜದಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಬಂಗಾರಿಕ್ಯಾಂಪ್‌ನ ಡಾ.ಸಿದ್ಧರಾಮೇಶ್ವರ ಶರಣರು, ಮಾಜಿ ಸಚಿವ ವೆಂಕಟರಾವ ನಾಡಗೌಡ, ಎಂಎಲ್ಸಿ ಬಸನಗೌಡ ಬಾದರ್ಲಿ ಇದ್ದರು.
Published on

ಸಿಂಧನೂರು: ವೀರಶೈವ ಸಮಾಜದಲ್ಲಿ ಹಲವು ಉಪಪಂಗಡಗಳಿದ್ದು, ಎಲ್ಲ ಒಂದಾಗಿ ಸಮಾಜ ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ತಾಲೂಕು ವೀರಶೈವ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೀರಶೈವ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪಂಚಪೀಠಗಳು ತತ್ವ, ಸಿದ್ಧಾಂತಗಳನ್ನು ಇಟ್ಟುಕೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ಎಲ್ಲ ಗೊಂದಲಗಳನ್ನು ಸರಿಪಡಿಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ವೀರಶೈವ ಸಮಾಜದ ಸಂಸ್ಥಾಪಕರಾಗಿದ್ದಾರೆ. ಜಾತಿಗಳು ಯಾರು ಹುಟ್ಟಿ ಹಾಕಿದರು ಎನ್ನುವುದಕ್ಕೆ ಸಾಕ್ಷಿ ಇಲ್ಲ. ಆದರೆ, ಧರ್ಮ ಮೀರಿ ಜಾತಿ ಬೆಳೆದಿದೆ. ಧರ್ಮದ ಹೆಸರಿನಲ್ಲಿ ಅಹಿಂಸೆ ನಡೆಯುತ್ತಿದೆ. ಪ್ರಸ್ತುತ ಸಂಸ್ಕಾರ ಅಗತ್ಯವಾಗಿದೆ. ದೇವಸ್ಥಾನಗಳಲ್ಲಿ ಮಾತ್ರ ನೆಮ್ಮದಿ ಸಿಗಲಿದೆ ಎಂದು ತಿಳಿಸಿದರು.

ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ವೀರಶೈವ ಸಮಾಜದಲ್ಲಿ ಒಡಕು ಮೂಡಲು ರಾಜಕಾರಣಿಗಳು ಕಾರಣರಾಗಿದ್ದಾರೆ. ಆದರೆ, ದೊಡ್ಡ ಸಮಾಜ ಒಗ್ಗೂಡಬೇಕು. ಸಮಾಜ ಕಟ್ಟುವಲ್ಲಿ ಯಾವ ರಾಜಕಾರಣವೂ ಬೇಡ. ಶ್ರೀಗಳ ಮಾರ್ಗದರ್ಶನದಲ್ಲಿ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದರು.

ಸಾನ್ನಿಧ್ಯವಹಿಸಿದ್ದ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದರು. ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಬಂಗಾರಿಕ್ಯಾಂಪ್‌ನ ಡಾ.ಸಿದ್ಧರಾಮೇಶ್ವರ ಶರಣರು, ಮರಿಸ್ವಾಮಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಂಪನಗೌಡ ತಾವರಗೇರಾ, ಪ್ರಮುಖರಾದ ರಾಮನಗೌಡ ಮಲ್ಕಾಪುರ, ದೊಡ್ಡನಗೌಡ ಕಲ್ಲೂರು, ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ, ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ವೀರೇಂದ್ರ ಪ್ರಸಾದ ಇದ್ದರು. ನಗರಸಭೆ ನೂತನ ಅಧ್ಯಕ್ಷೆ ಪ್ರಿಯಾಂಕಾ ರೋಹಿತ್, ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net