ಕಾಮಗಾರಿ ನಿಗದಿತ ಅವಧಿಗೆ ಪೂರ್ಣಗೊಳ್ಳಲಿ

New Tenginakayi Meeting New
Published on

ಹುಬ್ಬಳ್ಳಿ : ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಾರಂಭಗೊಳ್ಳಲಿರುವ ರಸ್ತೆ, ಗಟಾರು, ಒಳಚರಂಡಿ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು ಹಾಗೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಸೆಂಟ್ರಲ್ ಕ್ಷೇತ್ರದ ಕಾಮಗಾರಿಗಳ ಕುರಿತು ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಎಲ್ ಆಂಡ್ ಟಿ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕೆಲಸಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸೂಚಿಸಿದ ಶಾಸಕ ಟೆಂಗಿನಕಾಯಿ, ಕ್ಷೇತ್ರದ ಅನೇಕ ವಾರ್ಡ್​ಗಳಲ್ಲಿ ಪ್ರಾರಂಭಗೊಂಡಿರುವ ರಸ್ತೆ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಎಚ್ಚರಿಕೆ ನೀಡಿದರು.

ಗಟಾರುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಾಗಬೇಕು. ಇಲ್ಲದಿದ್ದರೆ ನೀರು ರಸ್ತೆ ಮೇಲೆ ನಿಂತು, ರಸ್ತೆಗಳು ಸಹ ಹಾಳಾಗುತ್ತವೆ. ಕೆಲವೆಡೆ ರಸ್ತೆಗಳು ಇದ್ದರೂ ಗಟಾರುಗಳು ಇಲ್ಲ. ರಸ್ತೆಗಳ ಜತೆಗೆ ಅಕ್ಕಪಕ್ಕ ಗಟಾರುಗಳೂ ನಿರ್ಮಾಣಗೊಳ್ಳಬೇಕು ಎಂದು ಹೇಳಿದರು.

ಪಾಲಿಕೆ ಹಾಗೂ ಲೋಕೋಪಯೋಗಿ ಅಧಿಕಾರಿಗಳೊಂದಿಗೆ ಎಲ್ ಆಂಡ್ ಟಿ ಅಧಿಕಾರಿಗಳು ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್​ಗಳಲ್ಲಿ ನಿರಂತರ ನೀರು ಪೂರೈಕೆ ಪ್ರಾರಂಭಗೊಳ್ಳುವುದರಿಂದ ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಬೇಕಿದೆ ಎಂದರು. ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಸಂತೋಷ ಚವ್ಹಾಣ, ಉಮಾ ಮುಕುಂದ, ರೂಪಾ ಶೆಟ್ಟಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿಜಯಕುಮಾರ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net