ನಿಗದಿ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಸೂಚನೆ

17
Published on

ಮೈಸೂರು: ವಿವಿಧ ಯೋಜನೆಗಳಿಂದ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ವಾಪಸ್ ಆಗದಂತೆ ನಿಗದಿತ ದಿನದೊಳಗೆ ಎಲ್ಲ ಯೋಜನೆ, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾನಾ ಯೋಜನೆಗಳಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಅಂತಹ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಬೇಕು. ಇದುವರೆಗೆ ಆರಂಭಿಸದಿರುವ ಕಾಮಗಾರಿಗಳನ್ನು ತಕ್ಷಣ ಆರಂಭಿಸುವ ಜತೆಗೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದರೆ ಅವುಗಳನ್ನು ಮುಗಿಸಬೇಕು. ಅಪೂರ್ಣ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಯೋಜನೆಗಳಿಗೆ ಬಿಡುಗಡೆಗೊಂಡ ಅನುದಾನ ಬಳಕೆ ಮಾಡದಿದ್ದಲ್ಲಿ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಮಾತನಾಡಿ, ಕೇಂದ್ರ, ರಾಜ್ಯವಲಯದಿಂದ ಜಿಲ್ಲೆಗೆ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ, ಖರ್ಚು ಮತ್ತು ಟೆಂಡರ್ ಹಂತದಲ್ಲಿರುವ ಕಾಮಗಾರಿಗಳ ವಿವರ ನೀಡಿದರು.

ಡಿಡಿಪಿಐ ಜವರೇಗೌಡ ಮಾತನಾಡಿ, ಜಿಲ್ಲೆಯ 49 ಪ್ರೌಢಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ಸೌಲಭ್ಯಗಳನ್ನುಒದಗಿಸಲು 1.58 ಕೋಟಿ ರೂ. ವೆಚ್ಚದ ಟೆಂಡರ್ ಕರೆದಿದ್ದು, ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಹೆಚ್ಚುವರಿ ನಿರ್ಮಾಣದ ಕಾಮಗಾರಿಗಳಿಗೆ ಪಂಚಾಯತ್‌ರಾಜ್ ಇಲಾಖೆಗೆ ಅನುದಾನ ನೀಡಿದ್ದು, ಕಾಮಗಾರಿ ಆರಂಭಿಸಬೇಕಿದೆ ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯಿಂದ 14 ವಿದ್ಯಾರ್ಥಿನಿಲಯಗಳ ಕಾಮಗಾರಿ ಶುರುವಾಗಿದ್ದು, 29 ಲಕ್ಷ ರೂ. ವೆಚ್ಚದಲ್ಲಿ ಕೆಲವು ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಆಯುಷ್ ಇಲಾಖೆಯಿಂದ 3 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಾತನಾಡಿ, ಕರೊನಾ ಬಂದ ಮೇಲೆ ಎಸ್‌ಆರ್ ದರವನ್ನು ಹೆಚ್ಚಿನ ಮಟ್ಟದಲ್ಲಿ ಹಾಕುತ್ತಿರುವುದರಿಂದ ಹೊಸ ಗುತ್ತಿಗೆದಾರರಿಗೆ ಸಮಸ್ಯೆ ಅಗಿದೆ. ಹಾಗಾಗಿ ಮರು ಟೆಂಡರ್ ಕರೆಯಬೇಕಿದೆ ಎಂದು ತಿಳಿಸಿದರು.

ಕೃಷಿ ಹೊಂಡ ನಿರ್ಮಾಣಕ್ಕೆ ಹಿಂದೇಟು:

ಬೇರೆ ಬೇರೆ ಯೋಜನೆಗಳಲ್ಲಿ ಶೇ.70, ಶೇ.80ರಷ್ಟು ಸಬ್ಸಿಡಿ ಇದೆ. ಆದರೆ ಕೃಷಿ ಹೊಂಡಕ್ಕೆ ಶೇ.40ರಷ್ಟು ಮಾತ್ರ ಸಬ್ಸಿಡಿ ಕೊಡುವುದರಿಂದ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಹೇಳಿದರು.

ಹೊಂಡ ನಿರ್ಮಾಣದ ಜತೆಗೆ ಹೊಸ ನಿಯಮದ ಪ್ರಕಾರ ಸುತ್ತಲೂ ತಂತಿಬೇಲಿ ನಿರ್ಮಾಣ ಮಾಡಬೇಕಿರುವ ಕಾರಣ ಹೆಚ್ಚಿನ ಆರ್ಥಿಕ ಹೊರೆ ಅಗುತ್ತದೆ ಎನ್ನುವ ಕಾರಣವನ್ನು ರೈತರು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ 51 ಹೆಕ್ಟೇರ್ ಪ್ರದೇಶವು ಮಳೆಯಿಂದ ಹಾನಿಗೀಡಾಗಿದೆ. ಸದ್ಯಕ್ಕೆ ಬಿತ್ತನೆ, ರಸಗೊಬ್ಬರದ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು.

ಎರಡು ಎಕರೆ ಜಾಗಕ್ಕೆ ಪ್ರಸ್ತಾವನೆ:

ಜಿಲ್ಲೆಯಲ್ಲಿ ರೇಷ್ಮೆ ಗೂಡು ಉತ್ಪಾದನೆ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ 2-3 ಟನ್ ಗೂಡು ಮಾರುಕಟ್ಟೆಗೆ ಬರುತ್ತಿದೆ. 5 ಟನ್‌ಗೂಡು ಬಂದಾಗ ಜಾಗದ ಸಮಸ್ಯೆ ಆಗುವ ಕಾರಣ ಪ್ರತ್ಯೇಕ ಎರಡು ಜಾಗ ಕೊಡುವಂತೆ ಬಂಡೀಪಾಳ್ಯ ಎಪಿಎಂಸಿಗೆ ಪತ್ರ ಬರೆಯಲಾಗಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.

ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿ ಎಪಿಎಂಸಿ ಅಧಿಕಾರಿ, ಬಂಡೀಪಾಳ್ಯದಲ್ಲಿರುವ 86 ಎಕರೆ ಪ್ರದೇಶವನ್ನು ಪೂರ್ಣವಾಗಿ ಬಳಕೆ ಮಾಡಲಾಗಿದೆ. ಹೊಸದಾಗಿ ಮೂರು ಎಕರೆಯಲ್ಲಿ ಏಳನೀರು ಘಟಕ, ಹವಾನಿಯಂತ್ರಿತ ಘಟಕ, ಘನತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಜಾಗದ ಕೊರತೆ ಇದೆ ಎಂದು ಹೇಳಿದರು.

ಬಂಡೀಪಾಳ್ಯದ ಸುತ್ತಮುತ್ತಲ ಪ್ರದೇಶದಲ್ಲಿ ರೇಷ್ಮೆಗೂಡು ಮಾರುಕಟ್ಟೆಗೆ ಎರಡು ಎಕರೆ ಜಾಗ ಗುರುತಿಸಿ, ಜಿಲ್ಲಾಡಳಿತದಿಂದಲೂ ಅಗತ್ಯವಿರುವ ಕಡೆ ಸ್ಥಳ ಪರಿಶೀಲಿಸಿ ಗುರುತು ಮಾಡುವಂತೆ ಸೆಲ್ವಕುಮಾರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ಜಿಲ್ಲೆಯಲ್ಲಿ 2500 ಅಂಗನವಾಡಿ ಕೇಂದ್ರಗಳಿದ್ದು, ಸರ್ಕಾರದ ಸೂಚನೆಯಂತೆ ಪೌಷ್ಟಿಕಾಂಶದ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡಗಳ ರಿಪೇರಿ, ಹೊಸ ಅಂಗನವಾಡಿ ಕೇಂದ್ರಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮೇವು ದಾಸ್ತಾನಿಗೆ ಖರೀದಿ:

ಈಗ ಮೇವಿನ ಸಮಸ್ಯೆ ಇರುವುದಿಲ್ಲ. ಮುಂದಿನ ಬೇಸಿಗೆ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಜಿಲ್ಲೆಗೆ ಅಗತ್ಯವಿರುವ 11,298 ಸಾವಿರ ಮೇವಿನ ಕಿಟ್‌ಗಳನ್ನು ಖರೀದಿಗೆ ಮುಂದಾಗಲಾಗಿದೆ. ಕಿಟ್ ಸರಬರಾಜು ಅದ ತಕ್ಷಣ ಎಲ್ಲ ತಾಲೂಕುಗಳಲ್ಲಿ ಸಂಗ್ರಹಿಸಿ ದಾಸ್ತಾನು ಮಾಡಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ನಾಗರಾಜು ಹೇಳಿದರು.

ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಬಂದಿದ್ದು, ಜಾನುವಾರು ಗಣತಿ ಮುಂದುವರಿದಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ದಾಟಿದ್ದು, 4.50 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 50 ಸಾವಿರ ಲೀಟರ್ ಹೆಚ್ಚು ಉತ್ಪಾದನೆಯಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net