

ಕೋಲಾರ: ಮಹಿಳೆಯರ ಮೇಲೆ ನಿತ್ಯ ನಡೆಯುತ್ತಿರುವ ಒಂದಲ್ಲ ಒಂದು ರೀತಿಯ ದೌರ್ಜನ್ಯ, ದಬ್ಬಾಳಿಕೆಗಳನ್ನು ತಡೆಗಟ್ಟಲು ಹಲವು ಕಾನೂನುಗಳಿವೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳುವ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎ.ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶುಕ್ರವಾರ ವಿಧಾನ್ ಸೇ ಸಮಾಧಾನ್ ಅಂಗವಾಗಿ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಗಳು ಮಹಿಳೆಯರ ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತಿದ್ದು, ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ. ಈ ಕಾನೂನು ಸಲಹೆಯ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆಯರು ಯಾವುದೇ ಹಿಂಜರಿಕೆ ಇಲ್ಲದೇ ಪಡೆದುಕೊಳ್ಳಬೇಕು ಎಂದರು.
ಮಹಿಳೆಯರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಕುಟುಂಬ ನಿರ್ವಹಣೆಯಲ್ಲಿ ತಮ್ಮ ರಕ್ಷಣೆ ಮತ್ತು ಹಕ್ಕುಗಳನ್ನು ಹೇಗೆ ಪಡೆಯಲು ಸಾಧ್ಯ ಎಂಬುದನ್ನು ತಿಳಿದುಕೊಂಡು ಹಾಗೇ ಮತ್ತೊಬ್ಬರಿಗೂ ತಿಳಿಸುವ ಪ್ರಯತ್ನಗಳಾಗಬೇಕು. ಯಾರ ಮೇಲೂ ಅವಲಂಬನೆ ಆಗದೇ ಸ್ವಯಂರಕ್ಷಣೆ ಸಾಮರ್ಥ್ಯವನ್ನು ಹೊಂದಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ಮಾತನಾಡಿ, ದೇಶಾದ್ಯಂತ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ರಾಜ್ಯದ 20 ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿಮಟ್ಟದಲ್ಲಿ ಮಹಿಳೆಯರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಇನ್ನಷ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸಿ ತಮ್ಮ ವ್ಯಾಪ್ತಿಯಲ್ಲಿ ಸದುಪಯೋಗವಾಗುವಂತೆ ಮಾಡಬೇಕು ಎಂದರು.
ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ತಂತ್ರಜ್ಞಾನವೇ ಇಲ್ಲದ ಸಂದರ್ಭದಲ್ಲಿ ದೇಶವು ಅಭಿವೃದ್ಧಿಯಾಗಿದೆ. ಇಂದು ತಂತ್ರಜ್ಞಾನ ವಿಶ್ವವ್ಯಾಪಿಯಾಗಿದೆ. ಸಾಮಾನ್ಯ ಜನತೆಗೂ ಸಮಾನತೆಯ ಹಕ್ಕುಗಳಿವೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಜಾಗೃತರಾಗಬೇಕು ಎಂದು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಬಗ್ಗೆ ಅರಿವು ಇರುವವರು ಅನ್ಯಾಯವಾದವರಿಗೆ ನ್ಯಾಯ ಕೊಡಿಸಬೇಕು ಹಾಗೂ ಅವರಿಗೆ ಇದರ ಬಗ್ಗೆ ಮಾಹಿತಿ ನೀಡಬೇಕು ಎಂದರು.