

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಿಲಿಕಾನ್ಸಿಟಿಯ ವಿವಿಧೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೆಲ ಸಂಘಟನೆಗಳು ಸಾಧಕಿಯರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಹಲವು ಸಂಘ- ಸಂಸ್ಥೆಗಳು ವಿಚಾರಸಂಕಿರಣ, ಪುಸ್ತಕ ಬಿಡುಗಡೆ ಮತ್ತಿತರ ಕಾರ್ಯಕ್ರಮ ಆಯೋಜಿಸಿದ್ದವು.
ಖಾಸಗಿ ಹೊಟೆಲ್ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಡಿಸಿಪಿ ಡಾ. ರೋಹಿಣಿ ಕಟೋಚ್ ‘ಈಸ್ಟರ್ನ್ ಭೂಮಿಕಾ’ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವರು, ಪುರುಷರಿಗೆ ಸಿಗುವ ಸವಲತ್ತುಗಳು ನನಗೇಕೆ ಸಿಗುತ್ತಿಲ್ಲ ಎಂಬ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು, ನಮ್ಮ ಶಕ್ತಿಯನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಎಲ್ಲರಿಗೂ ಅವರದ್ದೇ ಆದ ಶಕ್ತಿ ಮತ್ತು ದೌರ್ಬಲ್ಯಗಳು ಇರುತ್ತವೆ. ನಮ್ಮ ಶಕ್ತಿಯನ್ನು ಖುಷಿಯಿಂದ ಸಂಭ್ರಮಿಸಬೇಕು. ಮಹಿಳೆ ತಾನು ಬಯಸಿದ ಕೆಲಸ ಮಾಡಲು ಸ್ವತಂತ್ರಳಾಗಿರಬೇಕು. ಅದರ ಆಧಾರದಲ್ಲೇ ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳುವಂತಾಗಬೇಕು ಎಂದರು.
ನಾನು ಕರ್ನಾಟಕದವಳಲ್ಲ. ಆದರೂ ಹೊರಗಿನವಳು ಎಂಬ ಭಾವನೆ ಎಂದೂ ಬಂದಿಲ್ಲ. ಆ ರೀತಿಯ ಭಾವನೆ ಬರುವಂತೆ ಯಾರೂ ನಡೆದು ಕೊಂಡಿಲ್ಲ ಎಂದು ಹೇಳಿದರು.
ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ, ಕಲಾವಿದೆ ಡಾ. ಪುಷ್ಪಾ ದ್ರಾವಿಡ್ ಮಾತನಾಡಿ, ಮಹಿಳೆಯ ಸಾಧನೆಗೆ ಅವಳೊಬ್ಬಳೇ ಕಾರಣಳಲ್ಲ. ಆಕೆಯ ಹಿಂದೆ ಪಾಲಕರು, ಪತಿ, ಮಗ ಮತ್ತಿತರರ ಬಂಬಲವೂ ಇರುತ್ತದೆ ಎಂದು ಹೇಳಿದರು.
ಈಸ್ಟರ್ನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕೃತಿಕಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಮುಡಿಗೇರಿಸಿಕೊಂಡವರು
ಈಸ್ಟರ್ನ್ ಭೂಮಿಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅರ್ಚನಾ ಮೂರ್ತಿ, ಮಧು ಸಿಂಘಾಲ್, ರಜನಿ ಗೋಪಾಲಕೃಷ್ಣ, ಡಾ. ಸವಿತಾ, ಜ್ಯೋತಿ ಆರ್. ರಶ್ಮಿ, ಹರ್ಷಿತಾ, ಪೂರ್ಣಿಮಾ ರಜನಿ, ವೀಣಾ ಪಿ. ಕುಮಾರ್, ಡಾ. ಬಿ. ವನಿತಾ ಮತ್ತಿತರರನ್ನು ಗೌರವಿಸಲಾಯಿತು.