ಮಹಿಳೆಗೆ ಸ್ವಾತಂತ್ರೃವಿರಲಿ, ಸ್ವೇಚ್ಛಾಚಾರ ಸಲ್ಲ

h3-Shakti Sanchaya 5
Published on

ಹುಬ್ಬಳ್ಳಿ: ಸರ್ವರ ಸುಖ ಬಯಸುವ ಮಹಿಳೆಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಉತ್ಕೃಷ್ಟ ಹಾಗೂ ಪೂಜ್ಯನೀಯ ಸ್ಥಾನವಿದೆ. ಆಕೆಗೆ ಸ್ವಾತಂತ್ರೃ ಲಭಿಸಿದೆಯೇ ಹೊರತು ಸ್ವೇಚ್ಛಾಚಾರ ತಕ್ಕುದಲ್ಲ ಎಂದು ಕುಮುಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ ಸಲಹೆ ನೀಡಿದರು.
ಸಂಸ್ಕೃತಿ ಟ್ರಸ್ಟ್ ವತಿಯಿಂದ ನಗರದ ವಾಸವಿ ಮಹಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಧಾರವಾಡ ವಿಭಾಗದ ‘ಶಕ್ತಿ ಸಂಚಯ’ ಜಾಗೃತ ಮಹಿಳೆಯರ ಸಮಾವೇಶದಲ್ಲಿ ‘ಭಾರತೀಯ ಚಿಂತನೆಯಲ್ಲಿ ಮಹಿಳೆ’ ಕುರಿತು ಅವರು ಮಾತನಾಡಿದರು.
ವಿಶ್ವದ ಒಳಿತು ಬಯಸುವುದು ಭಾರತೀಯ ಸಂಸ್ಕೃತಿ. ಇದು ಅನಾದಿ ಕಾಲದಿಂದಲೂ ಇದೆ. ಪ್ರತಿಯೊಬ್ಬ ಸ್ತ್ರೀಯರಲ್ಲೂ ಶಕ್ತಿ ಇದೆ. ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಜಾಗೃತಗೊಳಿಸುವ ಅಗತ್ಯವಿದೆ. ಸ್ತ್ರೀಯರಿಗೆ ಶಿಕ್ಷಣ, ಸ್ವಾತಂತ್ರೃ ಹಿಂದಿನ ಕಾಲದಿಂದಲೂ ಲಭಿಸಿದೆ. ಋಷಿಗಳು ಹೇಗಿದ್ದರೋ ಹಾಗೆಯೇ ಋಷಿಕೆಯರು, ಬ್ರಹ್ಮಚಾರಿಣಿಯರು, ಮಂತ್ರದ್ರಷ್ಟಾರೆಯರೂ ಇದ್ದರು ಎಂದು ವಿವರಿಸಿದರು.
ವಿಧವೆಯರನ್ನೂ ಸುಮಂಗಲೆಯರಂತೆ ಕಾಣಬೇಕೆಬುಂದು ವೇದದಲ್ಲಿ ಉಲ್ಲೇಖವಿದೆ. ವೇದ ಕಾಲದ ಸ್ತ್ರೀಯರು 8-16 ವರ್ಷದವರೆಗೆ ಶಿಕ್ಷಣ ಪಡೆಯುತ್ತಿದ್ದರು. ಉನ್ನತ ಆರ್ಥಿಕ ಸ್ವಾತಂತ್ರ್ಯ ಹೊಂದಿದ್ದ ಸ್ತ್ರೀ, ತನ್ನ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನೂ ಹೊಂದಿದ್ದಳು ಎಂದರು.
ವಿವಾಹ ಸಂದರ್ಭದಲ್ಲೂ ತನ್ನ ಇಚ್ಛೆಯ ವರನನ್ನು ಆರಿಸಿಕೊಳ್ಳಲು ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಆಗಿನ ಅವಿಭಕ್ತ ಕುಟುಂಬಗಳ ಕೇಂದ್ರ ಬಿಂದು ಗೃಹಿಣಿಯಾಗಿದ್ದಳು. ಪ್ರಸ್ತುತ ಲವ್ ಇನ್ ರಿಲೇಷನ್, ಡೇಟಿಂಗ್, ವಿಭಕ್ತ ಕುಟುಂಬವು ಪಾಶ್ಚಾತ್ಯರ ಅನುಕರಣೆ. ಇದರಿಂದ ಸಮಾಜಕ್ಕೆ ಧಕ್ಕೆಯಾಗುತ್ತಿದೆ. ಸ್ತ್ರೀ ಶಕ್ತಿಯ ಜಾಗರಣದಿಂದ ಸಮಾಜ ಸದೃಢಗೊಳುಸುವುದು ಅನಿವಾರ್ಯ ಎಂದರು.
ದೇವರಹುಬ್ಬಳ್ಳಿಯ ಜನಪದ ಕಲಾವಿದೆ ಪಾರ್ವತವ್ವ ಹೊಂಗಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ತ್ರೀಯರ ಯಶಸ್ಸಿನ ಹಿಂದೆ ಪುರುಷರ ಪಾತ್ರವೂ ಗಮನಾರ್ಹವಾಗಿದೆ. ಮನೆ ನಿಭಾಯಿಸುವುದು ಮಹಿಳೆಯರ ಹೊರೆಯಲ್ಲ, ಬದಲಾಗಿ ಕರ್ತವ್ಯ. ಸ್ತ್ರೀಯರು ಒಗ್ಗಟ್ಟು ಸಮಾಜದ ಉನ್ನತಿಗೆ ಪೂರಕ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಜೀವನ ನಡೆಸುತ್ತ ಸಂಘಟಿತರಾಗಬೇಕು ಎಂದರು. ವಿಭಾಗ ಸಂಯೋಜಕಿ ಶಾಂತಾ ವೆರ್ಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಉದ್ಘಾಟಕರು, ವಕ್ತಾರರನ್ನು ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಗೋಮಾತೆಗೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಗೆ ಕೋಲಾಟ, ಲೇಜಿಂ ಆಕರ್ಷಣೆ ನೀಡಿದವು.
ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಸಹ ಕಾರ್ಯವಾಹಿಕಾ ಆಶಾ ನಾಯಕ, ಮಹಾನಗರ ಸಂಯೋಜಕಿ ಭಾರತಿ ನಂದಕುಮಾರ, ಸಹ ಸಂಯೋಜಕಿ ಡಾ. ಸುನಂದಾ ಕಳಕಣ್ಣವರ, ಸಪ್ನಾ ಮುಸಳಿ ಇತರರು ಇದ್ದರು.

  • ಮಾತೃತ್ವ ಶಕ್ತಿ ಜಾಗೃತವಾಗಲಿ: ಮಹಿಳೆಯರಲ್ಲಿ ಸ್ತ್ರೀತ್ವ ಶಕ್ತಿಗಿಂತ ಮಾತೃತ್ವ ಶಕ್ತಿ ಜಾಗೃತವಾದಾಗ ಭಾರತದ ವಿಕಾಸಕ್ಕೆ ಪೂರಕ ಎಂದು ಬೆಂಗಳೂರಿನ ಖ್ಯಾತ ನ್ಯಾಯವಾದಿ ಕ್ಷಮಾ ನರಗುಂದ ಹೇಳಿದರು.
  • ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಸಮಾರೋಪದಲ್ಲಿ ಅವರು ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು.
  • ಬೌದ್ಧಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಭಾರತ ವಿಕಾಸವಾಗಬೇಕು. ಪ್ರಾಚೀನ ಇತಿಹಾಸ ಅವಲೋಕಿಸಿದಾಗ ವಿಜ್ಞಾನ ಕ್ಷೇತ್ರದ ಏಳಿಗೆಯಲ್ಲಿ ಅನೇಕ ಮಹಿಳೆಯರ ಕೊಡುಗೆ ಅಪಾರವಾಗಿದೆ. ಕಿತ್ತೂರು ಚನ್ನಮ್ಮ, ಕೆಳದಿ ಚನ್ನಮ್ಮ ಅವರಂಥವರು ನಮ್ಮ ಶೌರ್ಯ ಪರಂಪರೆಯಲ್ಲಿ ಕಾಣುತ್ತಾರೆ. ಜತೆಗೆ ರಾಜನೀತಿಯಲ್ಲೂ ಮಹಿಳೆಯರು ತಮ್ಮ ಪಾಂಡಿತ್ಯ ತೋರಿದ್ದಾರೆ ಎಂದರು.
  • ಸ್ತ್ರೀರೋಗ ಶಾಸ್ತ್ರಜ್ಞೆ ಡಾ. ಗೀತಾ ಉತ್ತೂರ, ಉಪನ್ಯಾಸಕಿ ವಿಜಯಶ್ರೀ ರಾನಡೆ, ಅರಿವಳಿಕೆ ತಜ್ಞೆ ಡಾ. ಅಶ್ವಿನಿ ರಾಮಸ್ವಾಮಿ, ನ್ಯಾಯವಾದಿ ಗೀತಾಂಜಲಿ ಕಾಮತ್, ನಿಡವಣಿ ವಾಣಿಜ್ಯ ಕಾಲೇಜ್ ಚೇರ್ಮನ್ ಪ್ರಭಾ ನಿಡವಣಿ, ಅರುಂಧತಿ ಕಾಮತ್ ಇವರ ನೇತೃತ್ವದಲ್ಲಿ ಚರ್ಚೆ ನಡೆಯಿತು.


ಸಂಕಷ್ಟದಲ್ಲಿರುವ ಮಹಿಳೆಗೆ ಸಾಂತ್ವನ ಅಗತ್ಯ. ಇದರ ಜತೆಗೆ ಸ್ವಾಭಿಮಾನದ ಕಲೆ ಕಲಿಸಿದರೆ, ಇಡೀ ಕುಟುಂಬವೇ ಉಜ್ವಲವಾಗಲಿದೆ. ಆರೋಗ್ಯ, ಕಾನೂನು ಸೇರಿ ಯಾವುದೇ ಇಲಾಖೆಯ ತೊಡಕುಗಳಿರಲಿ, ಅದಕ್ಕೆ ಪೂರಕ ಸಿದ್ಧತೆ ತಾನು ಮಾಡಿಕೊಳ್ಳುತ್ತಾಳೆ. ಮಂದಹಾಸು ಬೀರುತ್ತಾಳೆ.
-ಡಾ. ಅಶ್ವಿನಿ ರಾಮಸ್ವಾಮಿ, ಅರಿವಳಿಕೆ ತಜ್ಞೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net