ನೇಕಾರರ ಸೇವಾ ಸಂಘ ಬದುಕಿಗೆ ಬೆಳಕಾಗಲಿ

mlp 6-2
ಮಹಾಲಿಂಗಪುರದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ರಬಕವಿಯ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿದರು. ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಸಂಗಪ್ಪ ಊದಗಟ್ಟಿ ಇದ್ದರು.
Published on

ಮಹಾಲಿಂಗಪುರ: ಕಟ್ಟ ಕಡೆಯ ನೇಕಾರನು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಔದ್ಯೋಗಿಕ, ಶೈಕ್ಷಣಿಕವಾಗಿ ಮುಂದೆ ಬರಲು ಸಂಘಟಿತರಾಗಿ ಸರ್ಕಾರದ ಮುಂದೆ ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚಿಸಿ ನೇಕಾರರ ಬೇಡಿಕೆಗಳ ಗಮನಸೆಳೆಯುವಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರಬಕವಿಯ ಬ್ರಹ್ಮಾನಂದ ಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ಜಯಲಕ್ಷ್ಮೀ ನಗರದಲ್ಲಿ ಮಂಗಳವಾರ ಕರಾನೇಸೇ ಸಂಘದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಚೇರಿ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳ, ಎಲ್ಲ ತಾಲೂಕುಗಳ ನೇಕಾರರಿಗೆ ಸೇವೆ ಸಿಗುವಂತಾಗಲಿ. ಮುಂದೆಯೂ ಎಲ್ಲ ಸಮಾನ ಮನಸ್ಕ ನೇಕಾರರು ಈ ಸಂಘಟನೆಗೆ ಸೇರಿ ನೇಕಾರರ ಬದುಕು ಹಸನಾಗಿಸವಂತಾಗಲಿ ಎಂದರು.

ಚಿಮ್ಮಡ ವಿರಕ್ತಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ರೈತ ಮತ್ತು ನೇಕಾರರು ಈ ರಾಜ್ಯದಲ್ಲಿ ಹೋರಾಟ ಮಾಡದೆ ಏನನ್ನೂ ಪಡೆದುಕೊಳ್ಳಲಾಗದಿರುವ ಪರಿಸ್ಥಿತಿ ಇದೆ. ಸರ್ಕಾರಗಳು ನೇಕಾರ ಮತ್ತು ರೈತರ ಹೋರಾಟಗಳನ್ನು ಗೌರವಿಸಿ ಕುಂದು ಕೊರತೆ ನೀಗಿಸಬೇಕು. ನಮ್ಮದೇ ಬುತ್ತಿ ನಮ್ಮದೇ ಬಸ್ ಚಾರ್ಜ್ ನಮ್ಮ ಹಕ್ಕುಗಳಿಗಾಗಿ ಹೋರಾಟ ಎನ್ನುವ ಧ್ಯೇಯೋದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಪುರಸಭೆ ಸದಸ್ಯರಾದ ರವಿ ಜವಳಗಿ, ಪ್ರಲ್ಹಾದ ಸಣ್ಣಕ್ಕಿ, ರಾಜು ಜಮಕೇರಿ, ಬಸವರಾಜ ಹಿಟ್ಟಿನಮಠ ನೇಕಾರ ಮುಖಂಡರಾದ ರಾಜೇಂದ್ರ ಮಿರ್ಜಿ, ಸೋಮು ಮರೆಗುದ್ದಿ ಮಾತನಾಡಿದರು.

ಕಚೇರಿ ನಿರ್ವಹಣೆಗೆ ಗದಗ ಬೆಟಗೇರಿ ನೇಕಾರರು ಗಣಕಯಂತ್ರ ಹಾಗೂ ಮುದ್ರಣ ಯಂತ್ರ ಕೊಡ ಮಾಡಿದರು. ಬಳಿಕ ನಡೆದ ಸಭೆಯಲ್ಲಿ ಡಿ. 10 ರಂದು ಬೆಳಗಾಂವಿ ಚಲೋ ಹೋರಾಟ ಮಾಡಲು ನಿರ್ಧರಿಸಲಾಯಿತು.

ಮುಖಂಡರಾದ ಸಂಗಪ್ಪ ಊದಗಟ್ಟಿ, ಅರ್ಜುನ ಕುಂಬಾರ, ಲಕ್ಷ್ಮಣ ಡೋಣಿವಾಡಿ, ಓಂ ಬಾಗೇವಾಡಿ, ಭೀಮರಾವ್ ಖೋತ, ವಿರುಪಾಕ್ಷ ಕಾಗಿ, ರಾಘು ಬೆಳಗಲಿ, ರಮೇಶ ಹತ್ತಿಕಾಳ, ಬಸವರಾಜ ಕರಿ, ರಾಜು ದಡಿ, ಮಾಧುಸಾ ಮೆಹರವಾಡೆ ಸೇರಿ ರಬಕವಿ ಬನಹಟ್ಟಿ ದೋಣಿವಾಡಿ ಮಾಣಕಾಪುರ, ಗೋಕಾಕ, ಗದಗ-ಬೆಟಗೇರಿ, ಹೊಸೂರ, ರಾಂಪುರ, ಹುಲ್ಯಾಳದ ನೇಕಾರರು, ಸ್ಥಳೀಯ ನ್ಯಾಯವಾದಿಗಳು, ರೈತ ಸಂಘ ಕಾರ್ಮಿಕ ಸಂಘ ಹಿಂದು ಪರ ಸಂಘಟನೆಗಳು, ಕನ್ನಡ ಸಂಘ ಅಂಗವಿಕಲರ ಸಂಘದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net